ADVERTISEMENT

8 ತಿಂಗಳು ನೀರಿನ ಕೊರತೆ ಇಲ್ಲ: ಪರಮೇಶ್ವರ

ಬುಗುಡನಹಳ್ಳಿ ತಲುಪಿದ ಹೇಮಾವತಿ ನೀರು

​ಪ್ರಜಾವಾಣಿ ವಾರ್ತೆ
Published 26 ಮೇ 2025, 16:19 IST
Last Updated 26 ಮೇ 2025, 16:19 IST
ತುಮಕೂರು ತಾಲ್ಲೂಕಿನ ಬುಗುಡನಹಳ್ಳಿ ಕೆರೆಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಹಾಜರಿದ್ದರು
ತುಮಕೂರು ತಾಲ್ಲೂಕಿನ ಬುಗುಡನಹಳ್ಳಿ ಕೆರೆಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಹಾಜರಿದ್ದರು   

ತುಮಕೂರು: ಹಾಸನದ ಗೊರೂರು ಜಲಾಶಯದಿಂದ ಹೇಮಾವತಿ ನಾಲೆ ಮೂಲಕ ಹರಿಸುತ್ತಿರುವ ನೀರು ಭಾನುವಾರ ಮಧ್ಯರಾತ್ರಿ ಬುಗಡನಹಳ್ಳಿ ಕೆರೆ ತಲುಪಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಸೋಮವಾರ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಕೆರೆಯಲ್ಲಿ ಸಂಗ್ರಹವಾಗುವ ನೀರು ಮುಂದಿನ 8 ತಿಂಗಳ ಕಾಲ ನಗರಕ್ಕೆ ಪೂರೈಕೆ ಮಾಡಬಹುದು. ಕುಡಿಯುವ ನೀರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ನೀರು ಹರಿಸಲಾಗಿದೆ. 8 ದಿನಗಳಲ್ಲಿ ಕೆರೆ ಭರ್ತಿಯಾಗಲಿದೆ. ನಂತರ ಹೆಬ್ಬಾಕ, ನರಸಾಪುರ, ಅಮಾನಿಕೆರೆಗೆ ನೀರು ತುಂಬಿಸಲು ಪ್ರಯತ್ನಿಸಲಾಗುವುದು' ಎಂದು ಸಚಿವರು ಹೇಳಿದರು.

ಹಾಸನದಲ್ಲಿ ಇತ್ತೀಚೆಗೆ ಜರುಗಿದ ನೀರಾವರಿ ಸಲಹಾ ಸಮಿತಿಯಲ್ಲಿ ನೀರು ಹರಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಪ್ರತಿ ದಿನ 2 ಟಿಎಂಸಿ ನೀರು ಬಿಡಲಾಗುತ್ತದೆ. ಕೆರೆಯಲ್ಲಿ ಬೆಳೆದಿರುವ ಗಿಡಗಂಟಿ ತೆರವುಗೊಳಿಸಬೇಕು. ಕೆರೆಗೆ ಯಾವುದೇ ಕಲುಷಿತ ನೀರು ಸೇರದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ADVERTISEMENT

ತುಮುಲ್‌ ಅಧ್ಯಕ್ಷ ಎಚ್.ವಿ.ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಹೇಮಾವತಿ ನಾಲಾ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಸಂಪತ್‌ಕುಮಾರ್‌, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎ.ಸಿ.ಶಿವಶಂಕರ್, ತೋಟಗಾರಿಕೆ ಉಪ ನಿರ್ದೇಶಕಿ ಬಿ.ಸಿ.ಶಾರದಮ್ಮ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಗಿರೀಶ್‌ಬಾಬು ರೆಡ್ಡಿ ಇತರರು ಹಾಜರಿದ್ದರು.

ಮತ್ಸ್ಯಾಲಯಕ್ಕೆ ಮರುಜೀವ ನಗರದ ಜಿಲ್ಲಾ ಕ್ರೀಡಾಂಗಣದ ಬಳಿಯ ಮೀನುಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿರುವ ಮತ್ಸ್ಯಾಲಯವನ್ನು ₹35 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಸಚಿವ ಜಿ.ಪರಮೇಶ್ವರ ಮತ್ಸ್ಯಾಲಯಕ್ಕೆ ಸೋಮವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ‘ಸುಮಾರು 100 ಮಕ್ಕಳು ಕುಳಿತು ಸಾಕ್ಷ್ಯಚಿತ್ರ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಮುಂದಿನ 10 ದಿನದಲ್ಲಿ ನವೀಕರಣ ಕಾರ್ಯ ಪೂರ್ಣಗೊಳಿಸಲಾಗುವುದು. ವಿವಿಧ 36 ಜಾತಿಯ ಅಲಂಕಾರಿಕ ಮೀನುಗಳ ಅಕ್ವೇರಿಯಂ ಅಳವಡಿಸಲಾಗುತ್ತಿದೆ’ ಎಂದು ಜಿ.ಪಂ ಸಿಇಒ ಜಿ.ಪ್ರಭು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.