ADVERTISEMENT

ಹೇಮೆ ಈ ವರ್ಷವಾದರೂ ಪೂರ್ಣ ಹರಿಯುವುದೆ?

ಕೆ.ಜೆ.ಮರಿಯಪ್ಪ
Published 10 ಜುಲೈ 2021, 4:50 IST
Last Updated 10 ಜುಲೈ 2021, 4:50 IST
ಹೇಮಾವತಿ ನಾಲೆ
ಹೇಮಾವತಿ ನಾಲೆ   

ತುಮಕೂರು: ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಸಾಕಷ್ಟು ಪ್ರದೇಶಗಳಲ್ಲಿ ಬರ ಪರಿಸ್ಥಿತಿ ಮುಂದುವರಿದಿದ್ದು, ಹೇಮಾವತಿ ನೀರಿಗಾಗಿ ಜಿಲ್ಲೆಯ ಜನರು ಆಸೆಗಣ್ಣಿನಿಂದ ನೋಡುವಂತಾಗಿದೆ.

ಈ ವರ್ಷವಾದರೂ ಜಿಲ್ಲೆಗೆ ನಿಗದಿಪಡಿಸಿದಷ್ಟು ಹೇಮವಾತಿ ನೀರು ಹರಿದು ಬರುವುದೇ? ಎಂದು ಕಾತರರಾಗಿದ್ದಾರೆ. ಹಿಂದಿನ ವರ್ಷಕ್ಕಿಂತ ಸ್ವಲ್ಪ ಬೇಗ ನೀರು ಹರಿದು ಬಂದರೆ ಕೃಷಿಗೆ, ಕುಡಿಯಲು ನೆರವಾಗು ತ್ತದೆ ಎಂದು ಗೊರೂರು ಜಲಾ
ಶಯದಿಂದ ನೀರು ಹರಿಸುವ ವಿಚಾರ ಹೊರ ಬೀಳುವುದನ್ನೇ ಕಾಯುತ್ತಿದ್ದಾರೆ. ಹೇಮಾವತಿ ಜಲಾನಯನ ಪ್ರದೇಶದಲ್ಲಿ ಯಾವ ಪ್ರಮಾಣದಲ್ಲಿ ಮಳೆಯಾಗುತ್ತಿದೆ, ಜಲಾಶಯಕ್ಕೆ ಎಷ್ಟು ನೀರು ಹರಿದು ಬರುತ್ತಿದೆ. ಯಾವಾಗ ನಾಲೆಗೆ ಹರಿಸುವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಚಾರದಲ್ಲಿ ಮಗ್ನರಾಗಿದ್ದಾರೆ.

ನಡೆಯದ ಸಭೆ: ಜಲಾಶಯದಿಂದ ನದಿಗೆ ನೀರು ಬಿಡುವ ಮುನ್ನ ನೀರಾವರಿ ಸಲಹಾ ಸಮಿತಿ ಸಭೆ ನಡೆಯುತ್ತದೆ. ಈ ಸಭೆಯಲ್ಲಿ ಯಾವ ಭಾಗಕ್ಕೆ ಎಷ್ಟು ನೀರು ಹರಿಸಬೇಕು, ಯಾವ ದಿನದಿಂದ ಬಿಡಬೇಕು ಎಂದು ನಿರ್ಧರಿಸಲಾಗುತ್ತದೆ. ಜೂನ್‌ನಲ್ಲಿ ಮುಂಗಾರು ಆರಂಭವಾಗಿದ್ದು, ಇನ್ನೇನು ಜುಲೈ ಮಧ್ಯ ಭಾಗಕ್ಕೆ ಬಂದಿದ್ದರೂ ಸಲಹಾ ಸಮಿತಿ ಸಭೆ ನಡೆದು ಚರ್ಚಿಸಿಲ್ಲ. ಹೇಮಾವತಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಜಲಾಶಯದಲ್ಲಿ 2,896 ಅಡಿ ನೀರು ಸಂಗ್ರಹವಾಗಿದೆ. ಅಣೆಕಟ್ಟೆಯ ಗರಿಷ್ಠ ಮಟ್ಟ ತಲುಪಲು ಇನ್ನೂ 26 ಅಡಿಗಳಷ್ಟು ನೀರು ಬರಬೇಕಿದೆ.

ADVERTISEMENT

ಪ್ರತಿ ಸಲವೂ ಪ್ರಮುಖವಾಗಿ ಸಮಸ್ಯೆ ಆಗುವುದು ಜಲಾಶಯ ಬಹುತೇಕ ಭರ್ತಿಯಾಗುವ ಹಂತಕ್ಕೆ ಬಂದಾಗ ನಾಲೆಗಳಿಗೆ ನೀರು ಹರಿಸಲು ನಿರ್ಧರಿಸುವುದು. ಆಗ ಒಮ್ಮೆಲೆ ಒಳಹರಿವು ಹೆಚ್ಚಾಗುವುದ ರಿಂದ ಹೆಚ್ಚುವರಿ ನೀರನ್ನು ನಾಲೆಗಳಿಗೆ ಬಿಡಲು ಸಾಧ್ಯವಾಗುವುದಿಲ್ಲ. ಅನಿವಾರ್ಯವಾಗಿ ನದಿಗೆ ಹರಿಸಬೇಕಾಗುತ್ತದೆ. ನಾವು ಬಳಸಿಕೊಳ್ಳುವ ಮುನ್ನವೇ ನದಿ ಮೂಲಕ ಕೆಆರ್‌ಎಸ್ ಜಲಾಶಯ ತಲುಪುತ್ತದೆ. ನಂತರ ತಮಿಳುನಾಡಿಗೆ ವ್ಯರ್ಥವಾಗಿ ಹರಿದು ಹೋಗುತ್ತದೆ. ನಮ್ಮ ಭಾಗದಲ್ಲಿ ಕೆರೆಗಳನ್ನು ತುಂಬಿಸಿಕೊಳ್ಳುವುದರ ಒಳಗಾಗಿ ಮಳೆ ಕಡಿಮೆಯಾಗಿ, ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣವೂ ಕಡಿಮೆಯಾಗುತ್ತದೆ. ಅಂತಹ ಸಮಯದಲ್ಲಿ ಜಿಲ್ಲೆಗೆ ನಿಗದಿಪಡಿಸಿದಷ್ಟು ನೀರು ಬಳಕೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಕೊನೆ ಕ್ಷಣದಲ್ಲಿ ಹರಿಸುವುದಕ್ಕಿಂತ ಜಲಾಶಯ ಅರ್ಧದಷ್ಟು ಭರ್ತಿಯಾದ ಸಮಯದಲ್ಲಿ ನಿರ್ಧಾರ ಕೈಗೊಂಡು ನೀರು ಬಿಡಬೇಕು ಎಂಬ ಬೇಡಿಕೆ ಪ್ರತಿ ಸಲವೂ ವ್ಯಕ್ತವಾಗುತ್ತದೆ. ಜೂನ್‌ನಲ್ಲಿ ಮುಂಗಾರು ಆರಂಭವಾಗಿದ್ದು, ಜಲಾಶಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಹರಿದು ಬಂದಿರುತ್ತದೆ. ಜುಲೈ ಆರಂಭದಲ್ಲಿ ಬಿಡಲು ಪ್ರಾರಂಭಿಸಿದರೆ ಸಕಾಲದಲ್ಲಿ ಕೆರೆಗಳನ್ನು ತುಂಬಿಸಿಕೊಳ್ಳಬಹುದು. ನಮ್ಮ ಪಾಲಿನ ನೀರನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳುವುದರ ಜತೆಗೆ,ಹೆಚ್ಚುವರಿಯಾಗಿಯೂ ನೀರು ಸಿಗುತ್ತದೆ. ಈ ಕೆಲಸ ಯಾವ ವರ್ಷವೂ ಆಗದಿರುವುದರಿಂದ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.