ADVERTISEMENT

ಹೈಕೋರ್ಟ್‌ ಸುದ್ದಿ: ತುಮಕೂರು ನಗರದ ರಸ್ತೆ ಗುಂಡಿ ಮುಚ್ಚಲು ಕ್ರಮ

​ಪ್ರಜಾವಾಣಿ ವಾರ್ತೆ
Published 9 ಜನವರಿ 2024, 21:01 IST
Last Updated 9 ಜನವರಿ 2024, 21:01 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ತುಮಕೂರು ನಗರದ ರಸ್ತೆಗಳಲ್ಲಿ ಉಂಟಾಗಿರುವ ಅಪಾಯಕಾರಿ ಗುಂಡಿಗಳನ್ನು ಮುಚ್ಚಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ’ ಎಂದು ತುಮಕೂರು ಮಹಾನಗರ ಪಾಲಿಕೆ ಹೈಕೋರ್ಟ್‌ಗೆ ತಿಳಿಸಿದೆ.

ಈ ಸಂಬಂಧ ವಕೀಲ ಎಲ್.ರಮೇಶ್ ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ತುಮಕೂರು ಪಾಲಿಕೆ ಪರ ಹಾಜರಿದ್ದ ಆರ್.ಸುಬ್ರಹ್ಮಣ್ಯ, ಸ್ಥಳ ಪರಿಶೀಲನೆ ನಡೆಸಿ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಈ ಹಿಂದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಲಯ ನೀಡಿದ್ದ ನಿರ್ದೇಶನದ ಅನುಸಾರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ನೀಡಿದರು.

ADVERTISEMENT

‘ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಪಾಲಿಕೆಯ ಅಧಿಕಾರಿಗಳ ತಂಡದ ಜೊತೆಗೆ ಸ್ಥಳ ಪರಿಶೀಲನೆ ನಡೆಸಿದೆ. 38 ಕಡೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಆ ಪೈಕಿ 37 ಕಡೆ ರಸ್ತೆಗಳಲ್ಲಿ ಗುಂಡಿಗಳು ಕಂಡು ಬಂದಿವೆ’ ಎಂದು ವಿವರಿಸಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಪಾಲಿಕೆ ವರದಿ ಆಧರಿಸಿ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ ಎರಡು ವಾರಗಳಲ್ಲಿ ಹೊಸದಾಗಿ ವರದಿ ಸಲ್ಲಿಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಫೆಬ್ರುವರಿ 2ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.