ಪ್ರಜಾವಾಣಿ ವಾರ್ತೆ
ಶಿರಾ: ‘ಗ್ರಾಮ ಪಂಚಾಯಿತಿಗೆ ಒಂದರಂತೆ ಸರ್ಕಾರಿ ಶಾಲೆಯನ್ನು ಹೈಟೆಕ್ ಮಾದರಿಯಲ್ಲಿ ರೂಪಿಸುವುದೇ ನನ್ನ ಗುರಿ. ಈಗಾಗಲೇ ತಾಲ್ಲೂಕಿನಲ್ಲಿ ಹೈಟೆಕ್ ಮಾದರಿಯಲ್ಲಿ 5 ಶಾಲೆ ನಿರ್ಮಿಸುವ ಪ್ರಯತ್ನ ಮಾಡಿದ್ದೇನೆ’ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಹೇಳಿದರು.
ತಾಲ್ಲೂಕಿನ ತಾವರೆಕೆರೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ₹1 ಕೋಟಿ ವೆಚ್ಚದಲ್ಲಿ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಇತ್ತೀಚೆಗೆ ಅಮೇರಿಕಾಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಅಲ್ಲಿನ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಗೆ ಹೆಚ್ಚು ಬೇಡಿಕೆ ಇರುವುದನ್ನು ಗಮನಿಸಿದ್ದೇನೆ. ಅಲ್ಲಿ ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣ ನೀಡಲಾಗುತ್ತಿದ್ದು ನಮ್ಮಲ್ಲಿಯೂ ಸರ್ಕಾರಿ ಶಾಲಾ ಪ್ರವೇಶಕ್ಕೆ ಹೆಚ್ಚು ಬೇಡಿಕೆ ಬರುವಂತಹ ವಾತಾವರಣ ಸೃಷ್ಟಿ ಮಾಡಬೇಕು ಎಂದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಸರ್ಕಾರಿ ಶಾಲೆಗೆ ಮೂಲಸೌಕರ್ಯ ಒದಗಿಸಬೇಕು. 30 ವರ್ಷದ ರಾಜಕೀಯ ಅನುಭವದಲ್ಲಿ ಸರ್ಕಾರದ ಅನುದಾನ ಜೊತೆಗೆ ತಮ್ಮ ಸ್ವಂತ ಹಣಹಾಕಿ ಅಭಿವೃದ್ಧಿ ಮಾಡುತ್ತಿರುವುದನ್ನು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರಲ್ಲಿ ಮಾತ್ರ ನೋದ್ದೇನೆ’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ಮದ್ದೇವಳ್ಳಿ ರಾಮಕೃಷ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರಾಜು, ಮುಖ್ಯ ಶಿಕ್ಷಕಿ ವಿನೋದ ಸತ್ಯನಾರಾಯಣ, ಶರಾವತಿ, ಸತ್ಯಭಾಮ, ರಾಮಕೃಷ್ಣಪ್ಪ, ಸ್ನೇಹಪ್ರಿಯ ಶಿವು, ಬರಗೂರು ಶಿವಕುಮಾರ್, ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ನೇರಲಗುಡ್ಡ ಶಿವಕುಮಾರ್, ಸಂತೇಪೇಟೆ ನಟರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.