ADVERTISEMENT

ದಲಿತರಿಗೆ ಬ್ರಾಹ್ಮಣ್ಯ ದೀಕ್ಷೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 15:12 IST
Last Updated 22 ಏಪ್ರಿಲ್ 2019, 15:12 IST
ಬ್ರಾಹ್ಮಣ್ಯ ದೀಕ್ಷೆ ಪಡೆದಿರುವ ದಲಿತರು
ಬ್ರಾಹ್ಮಣ್ಯ ದೀಕ್ಷೆ ಪಡೆದಿರುವ ದಲಿತರು   

ಹುಲಿಯೂರುದುರ್ಗ (ಕುಣಿಗಲ್): ಹೋಬಳಿಯ ಉಜ್ಜನಿ ಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ಚೌಡೇಶ್ವರಿ ಅಮ್ಮನ ಜಾತ್ರಾ ಮಹೋತ್ಸವದಲ್ಲಿ ದಲಿತರಿಗೆ ಬ್ರಾಹ್ಮಣ್ಯ ದೀಕ್ಷೆ ನೀಡುವ ಆಚರಣೆ ಜರುಗುತ್ತದೆ. ಈ ಬಾರಿ ಏ.9ರಿಂದ ಜಾತ್ರೆ ಆರಂಭವಾಗಿದ್ದು 26ಕ್ಕೆ ಮುಕ್ತಾಯ ಆಗಲಿದೆ.

ಈ ಆಚರಣೆಗೆ ಜನರಲ್ಲಿ ಪೌರಾಣಿಕ ನಂಬಿಕೆಯೊಂದು ಇದು. ‘ನಾನು ಬ್ರಾಹ್ಮಣ. ಅನಾಥ’ ಎಂದು ದಲಿತ ಹುಡುಗನೊಬ್ಬ ಸಂಪ್ರದಾಯಸ್ಥ ಬ್ರಾಹ್ಮಣರ ಮನೆ ಕನ್ಯೆ ಹೆಬ್ಬಾರಮ್ಮಳನ್ನು ವಿವಾಹವಾಗುವನು.

ಬ್ರಾಹ್ಮಣರ ಬದುಕಿನ ರೀತಿ ರಿವಾಜುಗಳಂತೆ ಬದುಕುತ್ತಿರುತ್ತಾನೆ. ಈ ವೇಳೆ ಕಳೆದುಹೋದ ಮಗನನ್ನು ಹುಡುಕುತ್ತ ಆ ದಲಿತ ಯುವಕನ ತಾಯಿ ಬ್ರಾಹ್ಮಣರ ಮನೆಗೆ ಬರುತ್ತಾರೆ.

ADVERTISEMENT

‘ನಾನು ಬ್ರಾಹ್ಮಣ ಎಂದು ಸುಳ್ಳು ಹೇಳಿ ಮದುವೆ ಆಗಿದ್ದೇನೆ. ನೀನು ಅವರಂತೆಯೇ ನಡೆದುಕೊಳ್ಳಬೇಕು’ ಎಂದು ಯುವಕ ತಾಯಿಯನ್ನು ಕೋರುತ್ತಾನೆ. ಈ ನಡುವೆ ಹೆಬ್ಬಾರಮ್ಮ ದಂಪತಿಗೆ ಐದು ಮಕ್ಕಳು ಜನಿಸಿರುತ್ತವೆ.

ಒಮ್ಮೆ, ‘ಕಣಕಾಲು ನೆಲ್ಲಿ ಮೂಳೆಯ ರುಚಿ ಈ ಬ್ರಾಹ್ಮಣರ ಮನೆಯ ಊಟದಲ್ಲಿ ಇಲ್ಲ’ ಎಂದು ಆ ತಾಯಿ ಮಗನಿಗೆ ಹೇಳುತ್ತಿರುವುದು ಬ್ರಾಹ್ಮಣರ ಮನೆಯವರಿಗೆ ತಿಳಿಯುತ್ತದೆ. ಸುಳ್ಳು ಹೇಳಿದ ಗಂಡನ ಜೊತೆ ಬದುಕು ಮುಂದುವರಿಸುವುದು ಅಸಾಧ್ಯ ಎಂದು ಹೆಬ್ಬಾರಮ್ಮ ಅಗ್ನಿ ಪ್ರವೇಶ ಮಾಡುತ್ತಾಳೆ.

‘ಸಾವಿಗೂ ಮುನ್ನ ಹೆಬ್ಬಾರಮ್ಮನ ಕೋರಿಕೆಯಂತೆ ಗ್ರಾಮದ ಆರು ಮಂದಿ ದಲಿತರು ಪತಿ ಹಾಗೂ ಮಕ್ಕಳ ಪ್ರತಿರೂಪವಾಗಿ ಚೌಡೇಶ್ವರಿಯ ಜಾತ್ರಾ ದಿನಗಳಲ್ಲಿ ಬ್ರಾಹ್ಮಣ ದೀಕ್ಷೆ ಪಡೆಯುವರು. ಕಠಿಣ ವ್ರತ ಆಚರಿಸುವ ಮೂಲಕ ಪ್ರಾಯಶ್ಚಿತ್ತ ಕಂಡುಕೊಳ್ಳುತ್ತಾರೆ’ ಎಂದು ಗ್ರಾಮದ ರಾಮಲಿಂಗೇಗೌಡ ‘ಪ್ರಜಾವಾಣಿ’ಗೆ ವಿವರಿಸಿದರು.

ಬ್ರಾಹ್ಮಣ್ಯ ದೀಕ್ಷೆ ಸಮಯದಲ್ಲಿ ಧರಿಸುವ ಜನಿವಾರವನ್ನು ಜಾತ್ರೆ ಪೂರ್ಣಗೊಂಡ ನಂತರ ದಲಿತರು ಕೆರೆಯಲ್ಲಿ ವಿಸರ್ಜಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.