ADVERTISEMENT

ನನೆಗುದಿಗೆ ಬಿದ್ದ ಶಾಲಾ ಕೊಠಡಿ ಕಾಮಗಾರಿ: ಅಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 7:20 IST
Last Updated 8 ಸೆಪ್ಟೆಂಬರ್ 2025, 7:20 IST
ಹುಳಿಯಾರು ಹೋಬಳಿ ಲಕ್ಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನನೆಗುದಿಗೆ ಬಿದ್ದ ಕಟ್ಟಡ ಕಾಮಗಾರಿಯನ್ನು ಅಧಿಕಾರಿಗಳು ಪರಿಶೀಲಿಸಿದರು
ಹುಳಿಯಾರು ಹೋಬಳಿ ಲಕ್ಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನನೆಗುದಿಗೆ ಬಿದ್ದ ಕಟ್ಟಡ ಕಾಮಗಾರಿಯನ್ನು ಅಧಿಕಾರಿಗಳು ಪರಿಶೀಲಿಸಿದರು   

ಹುಳಿಯಾರು: ಮೂರು ವರ್ಷಗಳಿಂದ ಶಾಲಾ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿರುವ ಹೋಬಳಿಯ ಲಕ್ಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪಂಚಾಯತ್‌ ರಾಜ್‌ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಒಳಗೊಂಡ ತಂಡ ಶನಿವಾರ ಭೇಟಿ ನೀಡಿ ಪರಿಶೀಲಿಸಿತು.

ವಿವೇಕಾ ಯೋಜನೆಯಡಿ 2022ರಲ್ಲಿ ಹೊಸ ಕಟ್ಟಡ ಮಂಜೂರಾಗಿ ಮೂರು ವರ್ಷ ಕಳೆದರೂ ಕಟ್ಟಡ ಪೂರ್ಣಗೊಳ್ಳದೆ ನೆನಗುದಿಗೆ ಬಿದ್ದಿತ್ತು. ಕಟ್ಟಡದ ಕಳಪೆ ಕಾಮಗಾರಿ ಬಗ್ಗೆ ಲಂಚಮುಕ್ತ ಕರ್ನಾಟಕ ವೇದಿಕೆ ಸೇರಿದಂತೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ‘ಮೂರು ವರ್ಷ ಕಳೆದರೂ ಪೂರ್ಣಗೊಳ್ಳದ ಕಟ್ಟಡ ಕಾಮಗಾರಿ’ ಶೀರ್ಷಿಕೆಯಡಿ ಕಳೆದ ವಾರ ವರದಿ ಪ್ರಕಟವಾಗಿತ್ತು. ಈ ಹಿಂದೆ ತಳಪಾಯ ಕಳಪೆ ಕಾಮಗಾರಿ ಬಗ್ಗೆ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಅಲ್ಲದೆ ಮಕ್ಕಳ ಹಕ್ಕು ರಕ್ಷಣೆ ಆಯೋಗ ಸದಸ್ಯರು ಕೂಡ ಭೇಟಿ ನೀಡಿದ್ದರು.

ಕಾರ್ಯಪಾಲಕ ಎಂಜಿನಿಯರ್‌ ಹನುಮಂತಪ್ಪ ಅವರ ತಂಡ ಭೇಟಿ ನೀಡಿ ಕಾಮಗಾರಿ ಬಗ್ಗೆ ಮಾಹಿತಿ ಪಡೆದರು. ಕಟ್ಟಡ ಸಂಪೂರ್ಣ ಕಳಪೆ ಎಂಬ ಆರೋಪದ ಮೇರೆಗೆ ಬೆಂಗಳೂರಿನ ಗುಣಮಟ್ಟ ಪರಿಶೀಲನೆ ತಂಡ ಸಂಬಂಧಪಟ್ಟ ಕಾಮಗಾರಿಯ ವಸ್ತುಗಳನ್ನು ಪರಿಶೀಲಿಸಿದರು. ಗುಣಮಟ್ಟ ಪರಿಶೀಲನೆ ತಂಡ ಕಟ್ಟಡ ಕಾಮಗಾರಿ ಗುಣಮಟ್ಟದ ಬಗ್ಗೆ ವರದಿ ನೀಡಲಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಪಂಚಾಯತ್‌ ರಾಜ್‌ ಎಂಜನಿಯರಿಂಗ್‌ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮೋಹನ್‌ಕುಮಾರ್‌ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.