ಹುಳಿಯಾರು: ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಮಳೆಯಾಗಿದೆ. ಮಳೆ ರೈತರಲ್ಲಿ ಆಸೆ ಚಿಗುರಿಸಿದೆ. ಹಿಂಗಾರು ಬಿತ್ತನೆ ಸಮಯ ಮೀರುವ ಭೀತಿಯ ನಡುವೆಯೂ ರಾಗಿ, ನವಣೆ ಸೇರಿದಂತೆ ಇತರ ಧಾನ್ಯಗಳ ಬಿತ್ತನೆಗೆ ರೈತರು ಮುಂದಾಗಿದ್ದಾರೆ.
ಹೋಬಳಿ ವ್ಯಾಪ್ತಿಯಲ್ಲಿ ಆರ್ದ್ರಾ, ಪುನರ್ವಸು, ಪುಷ್ಯಾ ಮಳೆ ಸಮಯ ರಾಗಿ ಬಿತ್ತನೆ ಸಕಾಲ. ಈಗಾಗಲೇ ಈ ಎಲ್ಲಾ ಮಳೆಗಳ ಕಾಲ ಮುಗಿದು ಹೋಗಿದೆ. ಸೋಮವಾರ ಆಶ್ಲೇಷ ಆರಂಭವಾಗಿದ್ದು ಆರಂಭದ ದಿನವೇ ಭೂಮಿಯನ್ನು ತಣಿಸಿದೆ. ಹೋಬಳಿ ವ್ಯಾಪ್ತಿಯ ಎಲ್ಲಾ ಕಡೆ ಹದ ಮಳೆಯಾಗಿದ್ದು ಬಿತ್ತನೆಗೆ ದಾರಿ ಮಾಡಿದೆ.
ಬೋರನಕಣಿವೆ ವ್ಯಾಪ್ತಿಯಲ್ಲಿ 70 ಮಿ.ಮೀ ಮಳೆಯಾಗಿ ಆ ಭಾಗದ ರೈತರಲ್ಲಿ ಭರವಸೆ ಮೂಡಿಸಿದೆ. 2 ತಿಂಗಳಿನಿಂದ ಮಳೆ ಬಾರದೆ ರೈತರು ಆತಂಕಕ್ಕೆ ಒಳಗಾಗಿದ್ದರು. ಸದ್ಯ ದೀರ್ಘಾವಧಿ ರಾಗಿ ಬೀಜದ ತಳಿಗಳ ಬಿತ್ತನೆ ಸಮಯ ಮುಗಿದು ಹೋಗಿದ್ದು ಪ್ರಸ್ತುತ ಅಲ್ಪಾವಧಿ ತಳಿಯ ಬೀಜಬಿತ್ತನೆ ಮಾಡುವ ಅವಕಾಶವಿದೆ. ವಿವಿಧ ಕಡೆ ರಾಗಿ ಪೈರು ನಾಟಿ ಮಾಡುವ ಪರಿಪಾಠವಿದ್ದರೂ ಸಸಿ ಮಡಿಗಳನ್ನು ಮಾಡಿಕೊಳ್ಳದಿರುವುದು ರೈತರನ್ನು ಚಿಂತೆಗೀಡುಮಾಡಿದೆ. ಇನ್ನೂ ನೀರಾವರಿ ವ್ಯವಸ್ಥೆ ಹೊಂದಿರುವ ರೈತರು ರಾಗಿ ಪೈರು ನಾಟಿ ಮಾಡಲು ಅವಕಾಶವಿದೆ.
ಬಿತ್ತನೆ ಹೊಲದಲ್ಲಿ ಕಳೆ: 20 ದಿನಗಳಿಂದ ಬಿದ್ದಿರುವ ಸೋನೆ ಮಳೆಗೆ ರಾಗಿ ಬಿತ್ತನೆಗೆ ಹೊಲಗಳಲ್ಲಿ ಕಳೆ ಬೆಳೆದು ನಿಂತಿದೆ. ಸಾಮಾನ್ಯವಾಗಿ ಬಿತ್ತನೆಗೆ ಮುನ್ನ ರೈತರು ತಮ್ಮ ಹೊಲಗಳನ್ನು ಎರಡು ಅಥವಾ ಮೂರು ಬಾರಿ ಕುಂಟೆ ಹೊಡೆದು ಸ್ವಚ್ಛ ಮಾಡಿಕೊಳ್ಳತ್ತಾರೆ. ಸೋನೆ ಮಳೆಯಿಂದ ಕಳೆ ಬೆಳೆದು ನಿಂತಿರುವುದನ್ನು ಒಮ್ಮೆಲೇ ತೆಗೆಯುವುದು ತ್ರಾಸದಾಯಕ.
ಕೆಲ ರೈತರಿಗೆ ಜಮೀನು ಕಡಿಮೆ ಇರುವ ಕಾರಣ ಹೆಸರುಕಾಳು ಬಿತ್ತನೆ ಮಾಡಿದ್ದ ಹೊಲಗಳನ್ನು ಸ್ವಚ್ಛಗೊಳಿಸಿ ರಾಗಿ, ನವಣೆ, ಸಾಮೆ ಬಿತ್ತನೆ ಮಾಡುತ್ತಾರೆ. ರೈತರು ಹೊಲಗಳನ್ನು ಸ್ವಚ್ಛಗೊಳಿಸಲು ಕೆಲವರು ಟ್ರ್ಯಾಕ್ಟರ್‌ಗಳ ಮೊರೆ ಹೋಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.