ADVERTISEMENT

ಹುಳಿಯಾರು | ಕೆಟ್ಟು ನಿಂತ ನುಲೇನೂರು ನೀರಿನ ಘಟಕ: ಪರದಾಟ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 13:54 IST
Last Updated 11 ಏಪ್ರಿಲ್ 2025, 13:54 IST
ಹುಳಿಯಾರು ಹೋಬಳಿ ನುಲೇನೂರು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದೆ
ಹುಳಿಯಾರು ಹೋಬಳಿ ನುಲೇನೂರು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದೆ   

ಹುಳಿಯಾರು: ಹೋಬಳಿಯ ನುಲೇನೂರು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಒಂದು ವರ್ಷದಿಂದ ಕೆಟ್ಟು ಹೋಗಿದ್ದು, ಕುಡಿಯುವ ನೀರಿಗೆ ಗ್ರಾಮಸ್ಥರು ಪರದಾಡುವಂತಾಗಿದೆ.

ಗ್ರಾಮದ ಹಲವು ವರ್ಷದ ಬೇಡಿಕೆಯಂತೆ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿತ್ತು. ಆದರೆ ಕೆಲ ತಿಂಗಳು ಮಾತ್ರ ಕಾರ್ಯನಿರ್ವಹಿಸಿದ ಘಟಕ ದುರಸ್ತಿಗೆ ಬಂತು. ವರ್ಷದಿಂದಲೂ ಕುಡಿಯುವ ನೀರಿಗೆ ಜನರು ಬೇರೆ ಗ್ರಾಮಗಳನ್ನು ಅವಲಂಬಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕುಡಿಯುವ ನೀರಿಗಾಗಿ ಗ್ರಾಮಸ್ಥರು ನಾಲ್ಕೈದು ಕಿ.ಮೀ ದೂರದ ಗ್ರಾಮಗಳಿಗೆ ಹೋಗಿ ತರುವಂತಾಗಿದೆ. ಗ್ರಾಮದಲ್ಲಿ ಘಟಕವಿದ್ದರೂ ಸರಿಪಡಿಸದ ಕಾರಣ ಸಂಕಷ್ಟ ಎದುರಿಸುವಂತಾಗಿದೆ. ಘಟಕ ಸ್ಥಾಪನೆ ಮಾಡಿ ಅದರ ಮೇಲುಸ್ತುವಾರಿಯನ್ನು ಗ್ರಾಮ ಪಂಚಾಯಿತಿಗೆ ನೀಡಿಲ್ಲ. ಸಮಸ್ಯೆ ಬಗೆಹರಿಸುವಂತೆ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ ಇದುವರೆಗೂ ಹಸ್ತಾಂತರ ಮಾಡಿಲ್ಲ ಎನ್ನುತ್ತಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎನ್.ಟಿ.ಸುಧಾಕರ್‌ ಹೇಳುತ್ತಾರೆ.

ADVERTISEMENT

ಘಟಕ ಸ್ಥಾಪನೆ ಮಾಡಿದ್ದರೂ ಯಾವ ಇಲಾಖೆಯಿಂದ ಮಾಡಲಾಗಿದೆ ಎಂಬ ನಾಮಫಲಕ ಅಳವಡಿಸಿಲ್ಲ. ಯಾರನ್ನು ಕೇಳಬೇಕು ಎನ್ನುವುದೇ ತಿಳಿಯುತ್ತಿಲ್ಲ ಎಂದು ಕೆಲವರು ದೂರಿದ್ದಾರೆ. ಕೂಡಲೇ ಘಟಕದ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯವರು ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.