ADVERTISEMENT

ನಾಟಕದೊಂದಿಗೆ ಜಿಲ್ಲೆಗೆ ಅವಿನಾಭಾವ ಸಂಬಂಧ

ಅಮರರಂಗೋತ್ಸವಕ್ಕೆ ಚಾಲನೆ ನೀಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 21:03 IST
Last Updated 14 ಅಕ್ಟೋಬರ್ 2019, 21:03 IST
ತುಮಕೂರಿನಲ್ಲಿ ಭಾನುವಾರ ಅಮರ ರಂಗೋತ್ಸವ ನಾಟಕ ಪ್ರದರ್ಶನ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿದರು. ಸಾಹಿತಿ ಕವಿತಾಕೃಷ್ಣ ಇದ್ದರು
ತುಮಕೂರಿನಲ್ಲಿ ಭಾನುವಾರ ಅಮರ ರಂಗೋತ್ಸವ ನಾಟಕ ಪ್ರದರ್ಶನ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿದರು. ಸಾಹಿತಿ ಕವಿತಾಕೃಷ್ಣ ಇದ್ದರು   

ತುಮಕೂರು: ’ನಾಟಕದೊಂದಿಗೆ ತುಮಕೂರು ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ. ಜಿಲ್ಲೆಯಲ್ಲಿ ನಾಟಕಗಳ ಪ್ರದರ್ಶನ ನಿರಂತರವಾಗಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಭಿಪ್ರಾಯಪಟ್ಟರು.

ಭಾನುವಾರ ನಗರದ ಬಾಪೂಜಿ ಶಾಲೆಯಲ್ಲಿ ಅಮರೇಶ್ವರ ವಿಜಯ ನಾಟಕ ಮಂಡಳಿ ವಾಲ್ಮೀಕಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಅಮರ ರಂಗೋತ್ಸವ ಉದ್ಘಾಟಿಸಿ ಮಾತನಾಡಿದರು.

’ನಾಟಕಗಳ ಪ್ರದರ್ಶನ ಹೆಚ್ಚುತ್ತಿದ್ದರೂ ಅದಕ್ಕೆ ತಕ್ಕ ಪ್ರೋತ್ಸಾಹ ಪ್ರೇಕ್ಷಕರಿಂದ ದೊರೆಯದೇ ಇದ್ದರೂ, ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸುತ್ತಲೇ ಇದ್ದಾರೆ. ಜನರು ದೃಶ್ಯ ಮಾಧ್ಯಮದಿಂದ ಒಂದಿಷ್ಟು ಹೊರ ಬಂದು ನಾಟಕಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು’ ಎಂದರು.

ADVERTISEMENT

’ಸಮಾಜದಲ್ಲಿ ಅಶಾಂತಿ, ಅಸಹನೆ ಹೆಚ್ಚುತ್ತಿದೆ. ಸಾಹಿತ್ಯವನ್ನು ಜೀವನಕ್ಕೆ ಒಳಪಡಿಸಿಕೊಳ್ಳದೇ ಇರುವುದರಿಂದ ನಮ್ಮ ಮನಸ್ಸನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಆಗುತ್ತಿಲ್ಲ. ಸಾಹಿತ್ಯ ಮತ್ತು ಕಲೆಗಳು ಮಾತ್ರ ಜನರನ್ನು ಸರಿದಾರಿಗೆ ತರಬಲ್ಲವು’ ಎಂದರು.

ಸಾಹಿತಿ ಕವಿತಾಕೃಷ್ಣ ಮಾತನಾಡಿ, ‘ಎಲ್ಲ ಕಲೆಗಳಿಗೂ ತುಮಕೂರು ಜಿಲ್ಲೆ ತವರೂರು. ಗುಬ್ಬಿಯಲ್ಲಿ ಹುಟ್ಟಿದ ಚೆನ್ನಬಸಯ್ಯ ಅವರು ಗಂಗಾಧರಶಾಸ್ತ್ರಿಗಳ ಶಿಷ್ಯರಾಗಿ ರಂಗಭೂಮಿಯಲ್ಲಿ ಸೇವೆಯನ್ನು ಸಲ್ಲಿಸಿ, ಜಿಲ್ಲೆಯಲ್ಲಿ ರಂಗಕಲಾವಿದರನ್ನು ಸಂಘಟಿಸಿ ಈ ಕಲೆಯನ್ನು ಪ್ರೋತ್ಸಾಹಿಸುತ್ತಿರುವುದು ಉತ್ತಮವಾದ ಕೆಲಸವಾಗಿದೆ’ ಎಂದು ಹೇಳಿದರು.

ಡಿ.ವೆಂಕಟರಮಣಯ್ಯ ನಿರ್ದೇಶಿಸಿದ ಮತ್ತು ಡಿ.ಆರ್.ಬಸವರಾಜು ವಿರಚಿತ ಐತಿಹಾಸಿಕ ನಾಟಕ ವಜ್ರ ಪಂಜರ, ಶಾಂತಲಾದೇವಿ ಅವರು ನಿರ್ದೇಶನದ ಮತ್ತು ಯು.ಗೋವಿಂದೇಗೌಡ ಅವರು ಬರೆದ ಮಿಸ್ಟರ್ ಡುಪ್ಲಿಕೇಟ್ ಹಾಸ್ಯ ನಾಟಕ, ಮುದ್ದಯ್ಯನಪಾಳ್ಯದ ರಂಗ ಪರಂಪರೆ ಟ್ರಸ್ಟ ವತಿಯಿಂದ ಯು.ಗೋವಿಂದೇಗೌಡ ನಿರ್ದೇಶನದ, ವ್ಯಾಸದೇಶಪಾಂಡೆ ವಿರಚಿತ ಇವ ನಮ್ಮವ ಎಂಬ ಐತಿಹಾಸಿಕ ನಾಟಕ ಪ್ರದರ್ಶನಗೊಂಡವು.

ಅದೇ ರೀತಿ ಬೆಂಗಳೂರಿನ ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘದ ವತಿಯಿಂದ ಡಿ.ವೆಂಕಟರಮಣಯ್ಯನವರ ನಿರ್ದೇಶನ ಮಾಡಿದ ಮತ್ತು ದಿವಂಗತ ಎನ್.ಎಸ್.ರಾವ್ ಅವರು ರಚಿಸಿದ ವರಭ್ರಷ್ಟ ಪೌರಾಣಿಕ ನಾಟಕಗಳು ಅಮರ ರಂಗೋತ್ಸವದಲ್ಲಿ ಪ್ರದರ್ಶನವಾದವು.

ಎಂ.ಬಸವಯ್ಯ, ಸಂಶೋಧನಾ ಸಹಾಯಕ ಲಕ್ಷ್ಮೀರಂಗಯ್ಯ, ಶಾಂತಲಾದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.