ADVERTISEMENT

ಅಕ್ರಮ ಇಟ್ಟಿಗೆ ಕಾರ್ಖಾನೆ ತೆರವು; ಸಿಇಒಗೆ ಮನವಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 13:56 IST
Last Updated 7 ಜನವರಿ 2019, 13:56 IST

ತುಮಕೂರು: ಜನರು ಮತ್ತು ಜಾನುವಾರುಗಳಿಗೆ ಮಾರಕವಾಗುವ ರೀತಿಯಲ್ಲಿ ಹೊಗೆ ಉಗುಳುವ ಇಟ್ಟಿಗೆ ಕಾರ್ಖಾನೆಗಳನ್ನು ಕೂಡಲೇ ತೆರವುಗೊಳಿಸಲು ಸಂಬಂಧಪಟ್ಟ ಪಿಡಿಒಗೆ ಸೂಚನೆ ನೀಡಬೇಕು ಎಂದು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಸದಸ್ಯರು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮನವಿ ಸಲ್ಲಿಸಿದರು.

ಮಲ್ಲಸಂದ್ರ ಗ್ರಾಮ ಪಂಚಾಯಿತಿಗೆ ಸೇರಿದ ಅದಲಾಪುರದಲ್ಲಿ ಎ.ಬಿ.ಶಿವಶಂಕರಯ್ಯ ಎಂಬುವವರು ತಮ್ಮ 15 ಗುಂಟೆ ಭೂಮಿ ಜೊತೆಗೆ, ಪಕ್ಕದ ಸರ್ಕಾರದ ಜಮೀನನ್ನು ಒತ್ತುವರಿ ಮಾಡಿಕೊಂಡು ಯಾವುದೇ ಪರವಾನಗಿ ಪಡೆಯದೆ ಇಟ್ಟಿಗೆ ಕಾರ್ಖಾನೆ ನಡೆಸುತ್ತಿದ್ದಾರೆ.

ಇದರಿಂದ ಬರುವ ಹೊಗೆಯಿಂದ ಗ್ರಾಮದ ಜನರು, ಶಾಲೆಯ ಮಕ್ಕಳ ಶಾಸ್ವಕೋಶ ಸಂಬಂಧಿ ರೋಗಗಳಿಗೆ ತುತ್ತಾಗುತ್ತಿದ್ದಾರೆ. 2012ರಿಂದ ಈ ಬಗ್ಗೆ ಗ್ರಾಮದ ಜನರು ಪಂಚಾಯಿತಿಗೆ ಮನವಿ ಮಾಡಿದರೂ ಕಾರ್ಖಾನೆ ಸ್ಥಳಾಂತರಿಸಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಗ್ರಾಮದ ಜನರು ದೂರು ನೀಡಿದ ನಂತರ ಕೆಲ ದಿನ ಇಟ್ಟಿಗೆ ಸುಡುವುದನ್ನು ನಿಲ್ಲಿಸಲಾಗಿತ್ತು. ಗ್ರಾಮದ ಕೆಲವರು ಈ ಇಟ್ಟಿಗೆ ಗೂಡಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದು ಇವರನ್ನೇ ಬಳಸಿಕೊಂಡು ಜನರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅಧಿಕಾರಿಗಳಿಗೆ ಹೇಳಿಕೆ ಕೊಡಿಸಿದ್ದಾರೆ ಎಂದು ದೂರಿದರು.

ಕಾರ್ಖಾನೆ ಮುಚ್ಚಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಸೂಚನೆ ನೀಡಿದ್ದರೂ ಇದುವರೆಗೂ ಕ್ರಮಕೈಗೊಂಡಿಲ್ಲ. ಸಿಇಒ ಅವರು ಸ್ಥಳ ಪರಿಶೀಲಿಸಿ ಗ್ರಾಮಸ್ಥರ ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತಿರುವ ಇಟ್ಟಿಗೆ ಕಾರ್ಖಾನೆಯನ್ನು ತೆರವುಗೊಳಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.

ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ನಿಧಿಕುಮಾರ್, ಪದಾಧಿಕಾರಿಗಳಾದ ಸಿದ್ದಲಿಂಗಯ್ಯ, ಜಿ.ಸಿ.ಕೆ.ಗೋವಿಂದರಾಜು, ರಾಜಣ್ಣ ಕೋರ, ಕುಮಾರ್, ರಾಜೇಶ್, ಗವಿನರಸಯ್ಯ, ರಂಗಸ್ವಾಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.