
ಶಿರಾ: ತಾಲ್ಲೂಕಿಗೆ ಹರಿದು ಬರುತ್ತಿರುವ ಹೇಮಾವತಿ ನೀರಿಗೆ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ಸೇರುತ್ತಿದ್ದು, ಇದೇ ನೀರನ್ನು ನಗರದ ಜನತೆ ಕುಡಿಯುವಂತಾಗಿದೆ.
ತುಮಕೂರಿನ ವಸಂತನರಸಾಪುರ ಕೈಗಾರಿಕೆ ಪ್ರದೇಶದಿಂದ ಬರುವ ರಾಸಾಯನಿಕ ತ್ಯಾಜ್ಯ ನೆಲಹಾಳ್ ಕೆರೆ ಸೇರುತ್ತಿದ್ದು, ಅಲ್ಲಿಂದ ಹುಂಜನಾಳ್ ಕೆರೆ ಹಾಗೂ ಶಿರಾಕ್ಕೆ ಹರಿದುಬರುತ್ತಿರುವ ಹೇಮಾವತಿ ನೀರು ಸೇರುತ್ತಿದೆ.
ಈಗಾಗಲೇ ನೆಲಹಾಳ್ ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿವೆ. ಸತ್ತಿರುವ ಮೀನುಗಳು ಸಹ ಕಳ್ಳಂಬೆಳ್ಳ ಕೆರೆಯ ಕಡೆ ಹರಿದು ಬರುತ್ತಿವೆ. ಇಲ್ಲಿಂದ ನೀರು ಶಿರಾ ದೊಡ್ಡ ಕೆರೆ ಮತ್ತು ಮದಲೂರು ಕೆರೆಗೆ ಹರಿದು ಹೋಗುತ್ತಿದ್ದು ಕೈಗಾರಿಕೆಗಳ ರಾಸಾಯಿನಿಕ ಮಿಶ್ರತವಾಗಿರುವ ನೀರು ಕುಡಿಯುವ ಪರಿಸ್ಥಿತಿ ಎದುರಾಗಿದೆ.
ಕೈಗಾರಿಕೆಗಳ ರಾಸಾಯಿಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಕೆರೆ, ಕಟ್ಟೆಗಳಿಗೆ ತಂದು ಸುರಿಯುತ್ತಿದ್ದು ಇದು ನೀರಿನ ಜೊತೆ ಮಿಶ್ರಣವಾಗಿ ಹಲವು ರೋಗಗಳಿಗೆ ಕಾರಣವಾಗುತ್ತಿದೆ. ಜಾನುವಾರುಗಳು ಹಲವಾರು ರೋಗಳಿಂದ ನರಳುತ್ತಿವೆ. ಇದು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ರೈತರ ಬೆಳೆಗಳು ನಾಶವಾಗುತ್ತಿವೆ.
ಶಿರಾ ತಾಲ್ಲೂಕಿಗೆ ಹೇಮಾವತಿ ಜೀವನಾಡಿ. ಶಿರಾ ನಗರದ ಜನತೆ ಕುಡಿಯಲು ಹೇಮಾವತಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ತಾಲ್ಲೂಕಿನ ಕೆರೆಗಳಿಗೆ ಹರಿದುಬರುವ ತ್ಯಾಜ್ಯ ಮಿಶ್ರಿತ ನೀರನ್ನು ತಡೆಯುವಂತೆ ರೈತರು ಒತ್ತಾಯಿಸಿದ್ದಾರೆ.
ಕಳ್ಳಂಬೆಳ್ಳ ಭಾಗದ ರೈತರು ಈಗಾಗಲೇ ಸಭೆ ನಡೆಸಿ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯವನ್ನು ಕೆರೆ ಕಟ್ಟೆಗಳಿಗೆ ಸುರಿಯುವುದನ್ನು ಜಿಲ್ಲಾಡಳಿತ ತಪ್ಪಿಸಿ ರೈತರ ಹಿತಕಾಯುವಂತೆ ಒತ್ತಾಯಿಸಿದ್ದಾರೆ.
‘ಪ್ರಜಾವಾಣಿ’ ಜೊತೆ ಮಾತನಾಡಿದ ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ನೇತೃತ್ವದಲ್ಲಿ ದೂರು ನೀಡಲಾಗಿದೆ. ಆದರೂ ಕೈಗಾರಿಕೆಗಳು ತ್ಯಾಜ್ಯವನ್ನು ತಂದು ಸುರಿಯುತ್ತಿದ್ದು ಇದರ ಪರಿಣಾಮವನ್ನು ತಾಲ್ಲೂಕಿನ ಜನತೆ ಅನುಭವಿಸುವಂತಾಗಿದೆ. ಈ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗಬೇಕು. ಜಿಲ್ಲಾಡಳಿತ ತಕ್ಷಣ ಕ್ರಮವಹಿಸಿ ಕೈಗಾರಿಕೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.