ADVERTISEMENT

ತುಮಕೂರು | ಒಳ ಮೀಸಲು: ಮೇ 5ರಿಂದ ಮಾಹಿತಿ ಸಂಗ್ರಹ

ಪರಿಶಿಷ್ಟ ಜಾತಿಯ ಸಮುದಾಯಗಳಿಗೆ ಒಳ ಮೀಸಲಾತಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 14:25 IST
Last Updated 23 ಏಪ್ರಿಲ್ 2025, 14:25 IST
   

ತುಮಕೂರು: ಪರಿಶಿಷ್ಟ ಜಾತಿಯ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ದತ್ತಾಂಶ ಸಂಗ್ರಹ ಜಿಲ್ಲೆಯಲ್ಲಿ ಮೇ 5ರಿಂದ ಆರಂಭವಾಗಲಿದೆ. ಮನೆಗಳಿಗೆ ಭೇಟಿನೀಡಿ ಮಾಹಿತಿ ಸಂಗ್ರಹಿಸಲು ಜಿಲ್ಲಾ ಆಡಳಿತ ಸಜ್ಜಾಗಿದೆ.

ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ಮಧ್ಯಂತರ ವರದಿ ಅನ್ವಯ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾಗಿ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಲು ಸರ್ಕಾರ ಆದೇಶಿಸಿದೆ. ಅದರಂತೆ ಜಿಲ್ಲೆಯಲ್ಲೂ ಮಾಹಿತಿ ಕಲೆ ಹಾಕಲಾಗುತ್ತದೆ.

ಮೂರು ಹಂತದಲ್ಲಿ ದತ್ತಾಂಶ ಸಂಗ್ರಹಿಸಲು ಯೋಜಿಸಲಾಗಿದೆ. ಮೊದಲ ಹಂತದಲ್ಲಿ ಮೇ 5ರಿಂದ 17ರ ವರೆಗೆ ಗಣತಿದಾರರು ಮನೆಗಳಿಗೆ ಭೇಟಿನೀಡಿ ಸಮೀಕ್ಷೆ ನಡೆಸಲಿದ್ದಾರೆ. ಎರಡನೇ ಹಂತದಲ್ಲಿ ಮೇ 19ರಿಂದ 21ರ ವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಮಾಡಲಿದ್ದಾರೆ. ಮೂರನೇ ಹಂತದಲ್ಲಿ ಮೇ 19ರಿಂದ ಮೇ 23ರ ವರೆಗೆ ಆನ್‌ಲೈನ್ ಮೂಲಕ ಸ್ವಯಂ ಘೋಷಣೆಯೊಂದಿಗೆ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯಲಿದೆ.

ADVERTISEMENT

ಈ ಸಂಬಂಧ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಬುಧವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಗತ್ಯ ನಿರ್ದೇಶನ ನೀಡಿದರು.

ಮನೆಗಳಿಗೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸಲು ಗಣತಿದಾರರನ್ನಾಗಿ ಶಿಕ್ಷಕರನ್ನು ಮಾತ್ರ ನೇಮಕ ಮಾಡಿಕೊಳ್ಳಬೇಕು. ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸದಂತೆ ಸರ್ಕಾರ ನಿರ್ದೇಶಿಸಿದೆ. ಜಿಲ್ಲಾ ಮಟ್ಟದಲ್ಲಿ ಏ. 28ರಂದು, ತಾಲ್ಲೂಕು ಹಂತದಲ್ಲಿ ಏ.29 ಹಾಗೂ 30ರಂದು ಗಣತಿದಾರರಿಗೆ ತರಬೇತಿ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ್, ಉಪ ವಿಭಾಗಾಧಿಕಾರಿಗಳಾದ ಗೌರವ್ ಕುಮಾರ್ ಶೆಟ್ಟಿ, ಸಪ್ತಶ್ರೀ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.