ADVERTISEMENT

ಈದ್ಗಾದಲ್ಲಿ ರಂಜಾನ್‌ ಪ್ರಾರ್ಥನೆ ಬೇಡ: ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಮೇ 2020, 16:46 IST
Last Updated 14 ಮೇ 2020, 16:46 IST
ಸಚಿವ ಜೆ.ಸಿ.ಮಾಧುಸ್ವಾಮಿ
ಸಚಿವ ಜೆ.ಸಿ.ಮಾಧುಸ್ವಾಮಿ   

ತುಮಕೂರು: ಮುಸ್ಲಿಮರು ರಂಜಾನ್‌ ಹಬ್ಬದ ವಿಶೇಷ ಪ್ರಾರ್ಥನೆ ಮಾಡಲು ಈದ್ಗಾ ಮೈದಾನಕ್ಕೆ ಹೋಗಬಾರದು. ಮನೆಯಲ್ಲಿಯೇ ಪ್ರಾರ್ಥನೆ ನೆರವೇರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ‘ಕೊರೊನಾ ಒಂದು ಸಮುದಾಯದ ಜನರಿಗೆ ಮಾತ್ರ ಬರುವಂತಹದ್ದಲ್ಲ. ಸಾರ್ವಜನಿಕರು ಕೇವಲ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಬಾರದು. ಕಾಯಿಲೆ ಪ್ರತಿಯೊಬ್ಬರಿಗೂ ಬರುತ್ತದೆ. ಇಲ್ಲಿ ಯಾರು ಕೂಡ ಹೊರಗಿನವರಲ್ಲ. ನಾವು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು. ನಿರ್ದಿಷ್ಟ ಸಮುದಾಯದವರನ್ನು ಕೆಲವೊಂದು ಹಳ್ಳಿಗಳಿಗೆ ಬಿಟ್ಟುಕೊಳ್ಳದೆ ಅವರದೊಂದಿಗೆ ವ್ಯವಹರಿಸುವುದನ್ನೇ ಬಿಟ್ಟಿದ್ದಾರೆ. ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ವರ್ತಿಸಬೇಕು’ ಎಂದು ಮನವಿ ಮಾಡಿದರು.

ಕೊರೊನಾ ಸೋಂಕಿತರಲ್ಲಿ ನಿರೋಧಕ ಶಕ್ತಿ ಕಡಿಮೆಯಾಗಿ ಜನರು ಸಾಯುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ವಯೋವೃದ್ಧರು, ಮಕ್ಕಳು, ಗರ್ಭಿಣಿ, ಬಾಣಂತಿಯರನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಈಗಾಗಲೇ ಸೋಂಕಿನಿಂದ ಚೇತರಿಸಿಕೊಂಡವರಿಗೆ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆ ಮಾಡಿಸುವಂತೆ ಸೂಚಿಸಿದರು.

ADVERTISEMENT

ಶಾಸಕ ಜಿ.ಬಿ ಜ್ಯೋತಿಗಣೇಶ್, ‘ನಗರದಲ್ಲಿ ಪಿ.ಎಚ್.ಕಾಲೊನಿ , ಕೆಎಚ್‍ಬಿ ಕಾಲೊನಿಯಲ್ಲಿರುವ ಕಂಟೈನ್ಮೆಂಟ್ ವಲಯದಲ್ಲಿ ಬಡ ಜನರಿಗೆ ಮಹಾನಗರ ಪಾಲಿಕೆ ವತಿಯಿಂದ ದಿನನಿತ್ಯ ಹಾಲು, ಆಹಾರ ಧಾನ್ಯಗಳನ್ನು ಒದಗಿಸಿಕೊಡಬೇಕು’ ಎಂದು ಮನವಿ ಮಾಡಿದರು.

ಮಹಾನಗರ ಪಾಲಿಕೆ ಮೇಯರ್ ಫರೀದಾ ಬೇಗಂ, ‘ಸೀಲ್‌ಡೌನ್‌ ಪ್ರದೇಶಗಳ ಬದಿಯ ಬಫರ್ ವಲಯದಲ್ಲಿ ಕುಡಿಯುವ ನೀರಿನ ಕೊಳವೆಬಾವಿ ಕೆಟ್ಟು ಹೋಗಿದೆ. ಅದನ್ನು ರಿಪೇರಿ ಮಾಡಲು ಸಹ ಜನರು ಬರುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.