ADVERTISEMENT

ಕೊಲೆ ಪ್ರಕರಣದಲ್ಲಿ ಹಲವರ ಕೈವಾಡ

ಗುಬ್ಬಿ ತಾಲ್ಲೂಕು ಹೂವಿನಕಟ್ಟೆಯಲ್ಲಿ ನಡೆದ ಯುವಕನ ಕೊಲೆ ಪ್ರಕರಣ,ಎಸ್ಪಿಗೆ ಮನವಿ ಪತ್ರ ಸಲ್ಲಿಸಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 8:42 IST
Last Updated 19 ಜುಲೈ 2019, 8:42 IST
ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅವರಿಗೆ ಗುರುವಾರ ಮನವಿ ಸಲ್ಲಿಸಿದ ಗ್ರಾಮಸ್ಥರು
ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅವರಿಗೆ ಗುರುವಾರ ಮನವಿ ಸಲ್ಲಿಸಿದ ಗ್ರಾಮಸ್ಥರು   

ತುಮಕೂರು: ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ಹೂವಿನಕಟ್ಟೆಯಲ್ಲಿ ನಡೆದ ರಂಗನಾಥಯ್ಯ ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಿ ನಾಮಕಾವಸ್ಥೆ ತನಿಖೆ ನಡೆಸಲಾಗಿದೆ. ಇದರ ಹಿಂದೆ ಹಲವು ಮಂದಿಯ ಕೈವಾಡ ಇರುವುದನ್ನು ಕೂಡಲೇ ಪತ್ತೆ ಹಚ್ಚಬೇಕು ಎಂದು ಗ್ರಾಮಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಬಂಧಿಸಲಾಗುವ ಆರೋಪಿಗಳ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಜುಲೈ 16ರಂದು ರಾತ್ರಿ 8.30ಕ್ಕೆ ಶ್ರೀನಿವಾಸ್ ಎಂಬ ವ್ಯಕ್ತಿ ದೂರವಾಣಿ ಕರೆ ಮಾಡಿ ರಂಗನಾಥ್‌ನನ್ನು ಕರೆಸಿಕೊಂಡು ಮಾರ್ಗ ಮಧ್ಯೆ ಆತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಕೊಲೆಗೆ ಜಾತಿ ವೈಷಮ್ಯವೂ ಕಾರಣ ಆಗಿದ್ದು, ಎಸ್ಸಿಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ADVERTISEMENT

ರಂಗನಾಥಯ್ಯನೊಂದಿಗೆ ಜೋಗಿಹಳ್ಳಿಯ ಸೀನಪ್ಪ ತನ್ನ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಹಲವು ಬಾರಿ ಗಲಾಟೆ ಮಾಡಿದ್ದ. ಜಾತಿ ದೌರ್ಜನ್ಯದ ಪ್ರಕರಣ ಸಂಬಂಧವಾಗಿ ಅಂದು ರಾತ್ರಿ ರಸ್ತೆ ಮೇಲೆ ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿ ಜಮೀನಿನಲ್ಲಿ ಶವ ಎಸೆಯಲಾಗಿದೆ ಎಂದು ಹೇಳಿದರು.

ಇದರ ಹಿಂದೆ ಬಹಳ ಜನಗಳ ಕೈವಾಡ ಇದ್ದು, ಕೂಡಲೇ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕೊಲೆಯಾಗಿರುವ ರಂಗನಾಥಯ್ಯನ ಕುಟುಂಬಕ್ಕೆ ಸೂಕ್ತ ನ್ಯಾಯ ಮತ್ತು ಪರಿಹಾರ ಕೊಡಿಸಬೇಕು. ಒಂದು ವೇಳೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಸ್ಪಿಯವರಿಗೆ ತಿಳಿಸಿದರು.

ಮದಕರಿ ಸೇನೆಯ ರಂಗನಾಥ್, ಶ್ರೀಧರ್, ಸಣ್ಣರಂಗಯ್ಯ, ಮೋಹನ್, ಮರಳೂರು ಚಂದ್ರಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.