ADVERTISEMENT

‘ಪರಿಷ್ಕೃತ ಪಠ್ಯದಲ್ಲಿ ಬೌದ್ಧಿಕ ವಿಷ’

ಜನಜಾಗೃತಿ ಪಾದಯಾತ್ರೆಗೆ ಜ್ಞಾನಪ್ರಕಾಶ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 5:13 IST
Last Updated 5 ಜುಲೈ 2022, 5:13 IST
ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಜನಜಾಗೃತಿ ಪಾದಯಾತ್ರೆಗೆ ಹಾಲ್ಕುರಿಕೆ ಕೆಂಪಮ್ಮ ದೇವಾಲಯ ಆವರಣದಲ್ಲಿ ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಸೋಮವಾರ ಚಾಲನೆ ನೀಡಿದರು. ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಹಾಗೂ ಇತರರು ಭಾಗವಹಿಸಿದ್ದರು.
ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಜನಜಾಗೃತಿ ಪಾದಯಾತ್ರೆಗೆ ಹಾಲ್ಕುರಿಕೆ ಕೆಂಪಮ್ಮ ದೇವಾಲಯ ಆವರಣದಲ್ಲಿ ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಸೋಮವಾರ ಚಾಲನೆ ನೀಡಿದರು. ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಹಾಗೂ ಇತರರು ಭಾಗವಹಿಸಿದ್ದರು.   

ತಿಪಟೂರು (ತುಮಕೂರು): ‘ಪಠ್ಯಪುಸ್ತಕದಲ್ಲಿ ಬೌದ್ಧಿಕ ವಿಷ ತುಂಬಿ ಬಾಲ್ಯದಲ್ಲೆಯೇ ಮಕ್ಕಳಿಗೆ ಉಣಿಸುವ ಮೂಲಕ ಅವರನ್ನು ಮನುವಾದದ ಗುಲಾಮಗಿರಿಗೆ ತಳ್ಳುವ ಹುನ್ನಾರವನ್ನು ಸರ್ಕಾರ ರೂಪಿಸಿದೆ’ ಎಂದು ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಟೀಕಿಸಿದರು.

ತಾಲ್ಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿ ಜನಜಾಗೃತಿ ಪಾದಯಾತ್ರೆಗೆಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಬಿಜೆಪಿ ಸರ್ಕಾರವು ಬಹುಜನ ಸಂಸ್ಕೃತಿ ನಾಶಮಾಡಿ, ಬ್ರಾಹ್ಮಣ್ಯವನ್ನು ಜನರ ಮೇಲೆ ಹೇರಲು ಹೊರಟಿದೆ.ಮನುವಾದದ ಈ ಹುನ್ನಾರದ ವಿರುದ್ಧ ಜನ ಜಾಗೃತರಾಗುತ್ತಿದ್ದಾರೆ. ಬಿಜೆಪಿ ಸಾಂಸ್ಕೃತಿಕ ರಾಜಕಾರಣ ಹುನ್ನಾರದ ವಿರುದ್ಧ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ನಾಡಿನ ಹಲವು ಮಠಾಧೀಶರು ಹಾಗೂ ಪ್ರಗತಿಪರ ಚಿಂತಕರ ನೇತೃತ್ವದಲ್ಲಿ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಧರಣಿ, ಹೋರಾಟ, ಜಾಗೃತಿ ಜಾಥಾ ಆಯೋಜಿಸಲಾಗಿದೆ’ ಎಂದರು.

ADVERTISEMENT

‘ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಪಠ್ಯಪುಸ್ತಕದಲ್ಲಿ ಕೋಮು ವಿಷ ತುಂಬುವ ಮೂಲಕ ಮಕ್ಕಳನ್ನು ಬೌದ್ಧಿಕ ಗುಲಾಮರನ್ನಾಗಿ ಮಾಡಲು ಹೊರಟಿದ್ದಾರೆ. ಸರ್ಕಾರ ಕೂಡಲೇ ಶಿಕ್ಷಣ ಸಚಿವರ ರಾಜೀನಾಮೆ ಪಡೆಯಬೇಕು ಹಾಗೂ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ರೂಪಿಸಿರುವ ಪರಿಷ್ಕೃತ ಪಠ್ಯಪುಸ್ತಕಗಳನ್ನು ವಾಪಸ್ ಪಡೆದು, ಹಳೆಯ ಪಠ್ಯ ಮುಂದುವರಿಸಬೇಕು’ ಎಂದುಪ್ರಗತಿಪರ ಚಿಂತಕ ಶ್ರೀಪಾದ್ ಭಟ್ ಒತ್ತಾಯಿಸಿದರು.

‘ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಮೂಲಕ ಬ್ರಾಹ್ಮಣೀಕರಣಕ್ಕೆ ಮುಂದಾಗಿದೆ. ಇದರ ವಿರುದ್ಧ ಜುಲೈ 9ರಂದು ತಿಪಟೂರಿನಲ್ಲಿ ನಡೆಯುವ ಸಮಾರಂಭದಲ್ಲಿ ನಾಡಿನ ಚಿಂತಕರು ಭಾಗವಹಿಸಲಿದ್ದಾರೆ’ ಎಂದು ತಿಪಟೂರು ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ. ಶಶಿಧರ್ ತಿಳಿಸಿದರು.

ಸಾಹಿತಿ ಎಸ್.ಜಿ ಸಿದ್ದರಾಮಯ್ಯ, ದಲಿತ ಮುಖಂಡ ಕುಂದೂರು ತಿಮ್ಮಯ್ಯ, ಎಂ.ಬಿ ಪರಮಶಿವಯ್ಯ, ಹಾಲ್ಕುರಿಕೆ ಗ್ರಾ.ಪಂ.ಅಧ್ಯಕ್ಷ ಎಂ.ಬಿ. ಉಮಾಮಹೇಶ್, ಮಾಜಿ ಜಿ.ಪಂ.ಸದಸ್ಯ ತ್ರಿಯಾಂಬಕ, ಶ್ರೀಕಾಂತ್ ಕೆಳಹಟ್ಟಿ , ನಾಗತಿಹಳ್ಳಿ ಕೃಷ್ಣಮೂರ್ತಿ, ಶರತ್ ಕಲ್ಲೇಗೌಡನಪಾಳ್ಯ ಭಾಗವಹಿಸಿದ್ದರು.

‘ಚಕ್ರತೀರ್ಥ ಸಮಿತಿ ಪರಿಷ್ಕರಿಸಿದ ಪಠ್ಯಪುಸ್ತಕ ರದ್ದುಪಡಿಸಿ’
ಕೊಪ್ಪ:
‘ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಿಸಿದ ಪಠ್ಯಪುಸ್ತಕ ರದ್ದುಪಡಿಸಬೇಕು. ಈ ನಿಟ್ಟಿನಲ್ಲಿ ಕುವೆಂಪು ಅವರ ಹುಟ್ಟೂರಿನಿಂದಲೇ ಪಕ್ಷಾತೀತವಾಗಿ ಹೋರಾಟ ಆರಂಭಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ಕಿಮ್ಮನೆ ರತ್ನಾಕರ್ ಹೇಳಿದರು.

ಪರಿಷ್ಕೃತ ಪಠ್ಯ ಪುಸ್ತಕ ಹಿಂಪಡೆದು ಹಳೆಯ ಪಠ್ಯ ಪುಸ್ತಕಗಳನ್ನೇ ಕೊಡಬೇಕು ಎಂದು ಒತ್ತಾಯಿಸಿ ‘ಪಠ್ಯ ಪುಸ್ತಕವೋ… ಪಕ್ಷ ಪುಸ್ತಕವೋ?’ ವಿಷಯ ಕುರಿತು ಮಲೆನಾಡು ಜನಪರ ಒಕ್ಕೂಟ, ವಿಶ್ವಮಾನವ ಸಂದೇಶ ವೇದಿಕೆ ವತಿಯಿಂದ ಸೋಮವಾರ ಇಲ್ಲಿಯ ಪುರಭವನದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು.

‘ನಾನು ಶಿಕ್ಷಣ ಸಚಿವನಾಗಿದ್ದಾಗ ಎಡ–ಬಲ ಎಲ್ಲರನ್ನೂ ಕಚೇರಿಗೆ ಕರೆದು ಪಠ್ಯ ಪರಿಷ್ಕರಣೆ ಬಗ್ಗೆ ಚರ್ಚಿಸಿ, ಮಾಹಿತಿ ಪಡೆದಿದ್ದೆ. ಬರಗೂರು ರಾಮಚಂದ್ರಪ್ಪ ಅವರ ಮನೆಗೆ ಹೋಗಿ ಚರ್ಚಿಸಿದ್ದೆ. ಪರಿಷ್ಕರಣೆಗೆ ಎರಡೂವರೆ ವರ್ಷಗಳ ಕಾಲ ಹಿಡಿಯುತ್ತದೆ, ಆದರೆ ಈಗಿನ ಸಮಿತಿ 15 ದಿನಗಳಲ್ಲೇ ಬದಲಾವಣೆ ಮಾಡಿ ಮೂರ್ಖತನ ತೋರಿಸಿದೆ’ ಎಂದು ಟೀಕಿಸಿದರು.

ಚಿತ್ರ ಸಾಹಿತಿ ಕವಿರಾಜ್ ಮಾತನಾಡಿ, ‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರೆ ಸಮಾಜಕ್ಕೆ ಕಂಠಕವಾಗುವುದನ್ನು ಖಂಡಿತಾ ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ, ಈಗ ಎಲ್ಲವನ್ನೂ ಆರ್‌ಎಸ್‌ಎಸ್‌ ನವರೇ ನಿಯಂತ್ರಿಸುತ್ತಿದ್ದಾರೆ. ಮತ್ತೆ ಚಾತುರ್ವರ್ಣ ವ್ಯವಸ್ಥೆಗೆ ಕೊಂಡೊಯ್ಯಬೇಕು ಎಂಬ ಉದ್ದೇಶದಿಂದಲೇ ಪಠ್ಯ ಪುಸ್ತಕ ಪರಿಷ್ಕರಣೆ ಈ ರೀತಿಯಾಗಿ ತಿದ್ದಿದ್ದಾರೆ’ ಎಂದುಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.