ADVERTISEMENT

ಕೊಡಿಗೇನಹಳ್ಳಿ: ಬ್ಯಾಲ್ಯ ಗ್ರಾಮ ಪಂಚಾಯಿತಿ ಅವ್ಯವಹಾರ, ಆರೋಪ

ತನಿಖೆಗೆ ಜಿಲ್ಲಾ ಪಂಚಾಯಿತಿ ಸಿಇಒ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 7:00 IST
Last Updated 15 ನವೆಂಬರ್ 2021, 7:00 IST
ಪುರವರ ಹೋಬಳಿಯ ಬ್ಯಾಲ್ಯ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಸದಸ್ಯರು ಒತ್ತಾಯಿಸಿದರು
ಪುರವರ ಹೋಬಳಿಯ ಬ್ಯಾಲ್ಯ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಸದಸ್ಯರು ಒತ್ತಾಯಿಸಿದರು   

ಕೊಡಿಗೇನಹಳ್ಳಿ: ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯ ಬ್ಯಾಲ್ಯ ಗ್ರಾಮ ಪಂಚಾಯಿತಿಯಲ್ಲಿ ₹ 25 ಲಕ್ಷದಷ್ಟು ಅವ್ಯವಹಾರ ನಡೆದಿದೆ. ಇದರಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಪ್ರಭಾವಿ ಮುಖಂಡರು ಭಾಗಿಯಾಗಿದ್ದಾರೆ. ಹಾಗಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರು ಒತ್ತಾಯಿಸಿದ್ದಾರೆ.

ಪಂಚಾಯಿತಿ ಆಡಳಿತ ಅಧಿಕಾರಕ್ಕೆ ಬಂದು 10 ತಿಂಗಳಾಗಿದ್ದರೂ ಇಲ್ಲಿಯವರೆಗೆ 10 ಸಾಮಾನ್ಯ ಸಭೆಗಳನ್ನು ಕರೆಯಬೇಕಾಗಿತ್ತು. ಕೇವಲ 3 ಸಭೆಗಳನ್ನು ಮಾತ್ರ ನಡೆಸಲಾಗಿದೆ. ಈ ಹಿಂದಿನ ಅವಧಿಯ ಬಿಲ್‌ಗಳು ಬಾಕಿಯಿವೆ ಎಂದು ತೋರಿಸಿ ವಿವಿಧ ಏಜೆನ್ಸಿಗಳಿಗೆ ₹ 28 ಲಕ್ಷ ಡ್ರಾ ಮಾಡಿ ಕೊಡಲಾಗಿದೆ ಎಂದುಸದಸ್ಯರಾದ ಅರುಣ್ ಕುಮಾರ್, ಯೋಗೀಶ್, ಬಿ.ಎಸ್. ಶಾರದಮ್ಮ ಮತ್ತು ಎಂ.ಎನ್. ರಾಧಮ್ಮದೂರಿದ್ದಾರೆ.

ಈ ಎಲ್ಲಾ ಬಿಲ್‌ಗಳನ್ನು ಪಾವತಿಸಲು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಿಲ್ಲ. ಹಾಗೆಯೇ ಹಿಂದಿನ ಪಿಡಿಒ ಹಳೇ ಬಿಲ್‌ಗಳು ಬಾಕಿಯಿವೆ ಎಂದು ಎಲ್ಲಿಯೂ ನಮೂದಿಸಿರುವುದಿಲ್ಲ ಎಂದು ಹೇಳಿದ್ದಾರೆ.

ADVERTISEMENT

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಒಂದು ದಿನದಲ್ಲಿ ₹ 20 ಸಾವಿರ ಮಾತ್ರ ಖರ್ಚು ಮಾಡಲು ಅಧಿಕಾರವಿದೆ. ಆದರೆ ನಿಯಮ ಮೀರಿ ಹಲವು ಏಜೆನ್ಸಿ ಮತ್ತು ಖಾಸಗಿ ವ್ಯಕ್ತಿಗಳಿಗೆ ಲಕ್ಷಾಂತರ ರೂಪಾಯಿಯನ್ನು ಒಂದೇ ದಿನದಲ್ಲಿ ಪಾವತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಸದಸ್ಯರು ಅಕ್ಟೋಬರ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾಹಿತಿ ಕೇಳಿದ್ದರೂ ಪಿಡಿಒ ಇದುವರೆಗೂ ಮಾಹಿತಿ ನೀಡಿಲ್ಲ. ಈ ದೂರುಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ದೊರೆಕಿಸಿ ಕೊಡಲು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ದೂರು ನೀಡಿದ್ದರೂ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದುಹೇಳಿದ್ದಾರೆ.

ಪಂಚಾಯಿತಿಯಲ್ಲಿ ನೌಕರರ ಹಾಜರಾತಿಗೆ ಬಯೊಮೆಟ್ರಿಕ್ ವ್ಯವಸ್ಥೆ ಇರುವುದಿಲ್ಲ. ಸಿ.ಸಿ ಕ್ಯಾಮೆರಾ ಅಳವಡಿಸಿರುವುದಿಲ್ಲ. ನೌಕರರ ಮೂವ್‌ಮೆಂಟ್ ಡೈರಿ ವ್ಯವಸ್ಥೆ ಇರುವುದಿಲ್ಲ. ಪಿಡಿಒ ಕೇಂದ್ರ ಸ್ಥಾನದಲ್ಲಿಲ್ಲ. ಸಮಯಕ್ಕೆ ಸರಿಯಾಗಿ ಹಾಜರಾಗದೇ ಅನುದಾನದ ಹಣವನ್ನು ಸಮಯಕ್ಕೆ ಸರಿಯಾಗಿ ಡ್ರಾ ಮಾಡುತ್ತಿಲ್ಲ ಎಂದು ದೂರಿದ್ದಾರೆ.

‘ಬ್ಯಾಲ್ಯ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಈಗಾಗಲೇ ನನಗೆ ಅನೇಕ ದೂರುಗಳು ಬಂದಿವೆ. ಅದರ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾ ಹೆಚ್ಚುವರಿ ಕಾರ್ಯದರ್ಶಿಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಡಾ.ವಿದ್ಯಾಕುಮಾರಿ ‘ಪ್ರಜಾವಾಣಿ’ಗೆತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.