ಕೊರಟಗೆರೆ: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಮೂರು ಮಂದಿ ಸದಸ್ಯರನ್ನು ತನ್ನ ಕಡೆಗೆ ಸೆಳೆಯುವ ಮೂಲಕ ಕಾಂಗ್ರೆಸ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ತನ್ನದಾಗಿಸಿಕೊಂಡಿದೆ. ಬಹುಮತ ಇದ್ದರೂ ಅಧಿಕಾರ ಹಿಡಿಯದ ಜೆಡಿಎಸ್‌ಗೆ ತೀವ್ರ ಮುಖಭಂಗ ಉಂಟಾಗಿದೆ.
ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ (ಮಹಿಳೆ), ಉಪಾಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ)ಗೆ ಮೀಸಲಾಗಿತ್ತು. ಕೊನೆ ಕ್ಷಣದಲ್ಲಿ 3ನೇ ವಾರ್ಡ್‌ನ ಜೆಡಿಎಸ್‌ನ ಅನಿತಾ, ಎರಡನೇ ವಾರ್ಡ್‌ನ ಉಸ್ನಾಫಾರಿಯಾ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಆಯ್ಕೆಯಾದರು.
ಚುನಾವಣೆಯಲ್ಲಿ 8ನೇ ವಾರ್ಡ್‌ನ ಜೆಡಿಎಸ್ ಸದಸ್ಯೆ ಮಂಜುಳಾ, ಅಧ್ಯಕ್ಷರಿಗೆ ಸೂಚಕರಾಗಿ ಹಾಗೂ ಪಕ್ಷೇತರ ಸದಸ್ಯ ನಟರಾಜು ಉಪಾಧ್ಯಕ್ಷರಿಗೆ ಸೂಚಕರಾಗಿದ್ದರು. ಒಟ್ಟು 9 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಉಳಿದಂತೆ ಜೆಡಿಎಸ್ ಸದಸ್ಯರಾದ ಕಾವ್ಯಶ್ರೀ, ಲಕ್ಷ್ಮೀನಾರಾಯಣ್, ಪುಟ್ಟನರಸಯ್ಯ ಭಾರತಿ ಹಾಗೂ ಬಿಜೆಪಿಯ ಪ್ರದೀಪ್ ಕುಮಾರ್ ಗೈರು ಹಾಜರಾಗಿದ್ದರು.
ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 15 ಸದಸ್ಯ ಬಲವಿದೆ. ಅದರಲ್ಲಿ 8 ಜೆಡಿಎಸ್, 5 ಕಾಂಗ್ರೆಸ್, 1 ಬಿಜೆಪಿ, 1 ಪಕ್ಷೇತರ ಸದಸ್ಯರು ಇದ್ದಾರೆ. ಜೆಡಿಎಸ್ 8 ಸದಸ್ಯರಲ್ಲಿ ಒಬ್ಬ ಸದಸ್ಯನನ್ನು ಅನರ್ಹಗೊಳಿಸಲಾಗಿದೆ. ಉಳಿದಂತೆ 7 ಜೆಡಿಎಸ್ ಸದಸ್ಯರು ಸೇರಿದಂತೆ ಒಟ್ಟು 14 ಸದಸ್ಯರಿದ್ದಾರೆ.
ಪರಿಶಿಷ್ಟ ಜಾತಿ ಒಬ್ಬರೇ ಮಹಿಳಾ ಸದಸ್ಯರು ಇದ್ದ ಕಾರಣಕ್ಕೆ ನಿರೀಕ್ಷೆಯಂತೆ ಜೆಡಿಎಸ್‌ನ ಅನಿತಾ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಅದರಂತೆ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಲ್ಲಿನ ಉಸ್ನಾಫಾರಿಯಾ, ಭಾರತಿ, ಮಂಜುಳ ಅವರಲ್ಲಿ ಯಾರಾದರೂ ಒಬ್ಬರು ಉಪಾಧ್ಯಕ್ಷರಾಗುತ್ತಾರೆ ಎನ್ನುವ ಚರ್ಚೆ ಇತ್ತು. ಆದರೆ, ಮೂರು ಮಂದಿ ಜೆಡಿಎಸ್ ಸದಸ್ಯರು ಹಾಗೂ ಒಬ್ಬ ಪಕ್ಷೇತರ ಸದಸ್ಯರಿಗೆ ಗಾಳ ಹಾಕುವ ಮೂಲಕ ಒಟ್ಟು 9 ಸಂಖ್ಯಾ ಬಲದೊಂದಿಗೆ ಕಾಂಗ್ರೆಸ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ತನ್ನದಾಗಿಸಿಕೊಂಡಿದೆ.
ಕಾಂಗ್ರೆಸ್ ವಿಜಯೋತ್ಸವ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ತನ್ನದಾಗಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಎಸ್ಎಸ್ಆರ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಗೃಹಸಚಿವ ಜಿ.ಪರಮೇಶ್ವರ ಮುಂದಿನ ಮುಖ್ಯಮಂತ್ರಿ ಎಂದು ಜೈಕಾರ ಕೂಗಿ ಸಂಭ್ರಮಿಸಿದರು.
ಸದಸ್ಯರಾದ ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ನಾಗರಾಜು, ನಂದೀಶ್, ಹೇಮಲತಾ, ಮಂಜುಳಾ, ನಟರಾಜು, ಫಯಾಜ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಡಿಕಲ್ ಅಶ್ವತ್ಥ್, ಅರಕೆರೆ ಶಂಕರ್, ಯುವ ಅಧ್ಯಕ್ಷ ಬೈರೇಶ್, ಮಹಿಳಾ ಅಧ್ಯಕ್ಷೆ ಜಯಮ್ಮ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಮುಖಂಡರಾದ ವಾಲೆಚಂದ್ರಯ್ಯ, ಎಚ್.ಕೆ.ಮಹಾಲಿಂಗಪ್ಪ, ಎಚ್.ಎಂ.ರುದ್ರಪ್ರಸಾದ್, ಕೆ.ವಿ.ಮಂಜುನಾಥ್, ಕೆ.ಎಲ್.ಆನಂದ್, ತುಂಗಾಮಂಜುನಾಥ್, ಲಾರಿ ಸಿದ್ದಪ್ಪ, ಗಣೇಶ್, ಮಕ್ತಿಯಾರ್, ವಿನಯ್ಕುಮಾರ್, ಸೈಯದ್ ಸೈಫ್ ಉಲ್ಲಾ, ಕಲೀಂ ಉಲ್ಲಾ, ಸತ್ಯನಾರಾಯಣ್, ಮಹೇಶ್, ದೀಪಕ್, ರಂಜನ್, ಲಕ್ಷ್ಮಿದೇವಮ್ಮ ಇತರರು ಇದ್ದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು. ಕೊರಟಗೆರೆ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಪಕ್ಷದಿಂದ ನೂತನ ಅಧ್ಯಕ್ಷರಾಗಿ ಅನಿತಾ ಮತ್ತು ಉಪಾಧ್ಯಕ್ಷರಾಗಿ ಉಸ್ಮಾಫಾರಿಯಾ ಆಯ್ಕೆ ಯಾಗಿರುವುದು ಸಂತಸ ತಂದಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ 5 ಸದಸ್ಯರೊಂದಿಗೆ ಜೆಡಿಎಸ್‌ನ ಮಂಜುಳಾ ಸೇರಿ 3 ಸದಸ್ಯರು ಹಾಗೂ ಪಕ್ಷೇತರ ಸದಸ್ಯ ನಟರಾಜು ಕಾಂಗ್ರೆಸ್ ಬೆಂಬಲಿಸಿ ಸೇರ್ಪಡೆಯಾಗಿದ್ದು ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬಂದಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.