ADVERTISEMENT

ಪಡೆದದ್ದು ಕೋವ್ಯಾಕ್ಸಿನ್; ದಾಖಲಾಗಿದ್ದು ಕೋವಿಶೀಲ್ಡ್‌!

ತಿಪಟೂರು ಲಸಿಕಾ ಕೇಂದ್ರದಲ್ಲಿ ಗೊಂದಲ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 5:07 IST
Last Updated 28 ಜೂನ್ 2021, 5:07 IST

ತಿಪಟೂರು: ನಗರದ ಮಿನಿ ವಿಧಾನಸೌಧದ ಬಳಿಯ ಲಸಿಕಾ ಕೇಂದ್ರದಲ್ಲಿ ಭಾನುವಾರ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋವ್ಯಾಕ್ಸಿನ್‌ ಲಸಿಕೆ ಪಡೆದಿದ್ದು, ಮೊಬೈಲ್‌ ಸಂದೇಶದಲ್ಲಿ ಕೋವಿಶೀಲ್ಡ್ ಎಂದು ದಾಖಲಾಗಿ ರವಾನೆಯಾಗಿದ್ದು ಗೊಂದಲಕ್ಕೆ ಕಾರಣವಾಯಿತು.

2,100ಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಲಸಿಕೆ ಪಡೆದಿದ್ದಾರೆ. ಲಸಿಕೆ ನೀಡುವಾಗ ಕೋವಿಶೀಲ್ಡ್ ಡೋಸ್‌ ಮುಗಿದ ನಂತರ ಕೋವ್ಯಾಕ್ಸಿನ್ ನೀಡಲು ಪ್ರಾರಂಭಿಸಿದ್ದಾರೆ. ಆದರೆ, ಆನ್‍ಲೈನ್ ಸಾಫ್ಟ್‌ವೇರ್‌ನಲ್ಲಿ ಲಸಿಕೆ ದಾಖಲೆ ಮಾಡುವಾಗ 100ಕ್ಕೂ ಅಧಿಕ ಮಂದಿಗೆ ಕೋವಿಶೀಲ್ಡ್ ಎಂದು ದಾಖಲಾಗಿದೆ. ಇದರಿಂದ ಕೆಲಕಾಲ ಗೊಂದಲಕ್ಕೆ ಕಾರಣವಾಗಿತ್ತು. ನಂತರ ಸಾಫ್ಟ್‌ವೇರ್‌ನಲ್ಲಿ ಸರಿಪಡಿಸಲಾಯಿತು.

ಲಸಿಕೆ ನೀಡುವಾಗ ಆನ್‍ಲೈನ್ ಜೊತೆಗೆ ಪುಸ್ತಕದಲ್ಲಿಯೂ ಕೈಬರಹದಲ್ಲಿ ಲಸಿಕೆದಾರರ ಮಾಹಿತಿ ದಾಖಲಾಗಿರುತ್ತದೆ. ಕೋವ್ಯಾಕ್ಸಿನ್ ಪಡೆದು ಕೋವಿಶೀಲ್ಡ್ ಎಂದು ನಮೂದಾಗಿರುವವರಿಗೆ ಫೋನ್ ಮೂಲಕ ಸಂಪರ್ಕಿಸಿ 30 ದಿನಗಳ ನಂತರ ಲಸಿಕೆ ಪಡೆಯುವಂತೆ ಸೂಚಿಸಲಾಗುವುದು. ಯಾವುದೇ ತೊಂದರೆ ಆಗುವುದಿಲ್ಲ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಸ್ಪಷ್ಟಪಡಿಸಿದರು.

ADVERTISEMENT

ಅಧಿಕಾರಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಲಸಿಕೆಯ ಹೆಸರು ಬದಲಿಸಿದರೆ ಎರಡನೇ ಡೋಸ್‌ ಪಡೆದುಕೊಳ್ಳುವಾಗ ತೊಂದರೆಯಾಗುತ್ತದೆ ಎಂದು ಪೋಷಕರು ಆರೋಗ್ಯ ಸಿಬ್ಬಂದಿಯೊಂದಿಗೆ ಕೆಲಕಾಲ ವಾಗ್ವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.