ತುಮಕೂರು: ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಜಾತಿ ಜನಗಣತಿ ವರದಿಗೆ ಅಖಿಲ ಕುಂಚಿಟಿಗರ ಮಹಾಮಂಡಲ ವಿರೋಧ ವ್ಯಕ್ತಪಡಿಸಿದೆ. ಮರು ಸಮೀಕ್ಷೆಗೆ ಆಗ್ರಹಿಸಿದೆ.
‘ವರದಿಯಲ್ಲಿ ಕುಂಚಿಟಿಗರ ಸಂಖ್ಯೆ ತಪ್ಪಾಗಿದೆ. ರಾಜ್ಯದಲ್ಲಿ ಸುಮಾರು 35 ಲಕ್ಷ ಕುಂಚಿಟಿಗರಿದ್ದಾರೆ, ವರದಿಯಲ್ಲಿ ಕೇವಲ 1.95 ಲಕ್ಷ ಎಂದು ನಮೂದಿಸಲಾಗಿದೆ. ಹಾಗಾಗಿ ಮರು ಸಮೀಕ್ಷೆ ನಡೆಸಬೇಕು. 1931ರ ಜನಗಣತಿ ಪ್ರಕಾರ ಕುಂಚಿಟಿಗರ ಸಂಖ್ಯೆ 1.16 ಲಕ್ಷದಷ್ಟಿತ್ತು. ಇಲ್ಲಿಯವರೆಗೆ ಏರಿಕೆಯಾಗಿರುವುದು ಕೇವಲ 1.95 ಲಕ್ಷ ಮಾತ್ರವೇ? ಎಂದು ಮಹಾಮಂಡಲ ಅಧ್ಯಕ್ಷ ರಂಗಹನುಮಯ್ಯ ಇಲ್ಲಿ ಮಂಗಳವಾರ ಪ್ರಶ್ನಿಸಿದರು.
ರಾಜ್ಯದ 19 ಜಿಲ್ಲೆಗಳ 46 ತಾಲ್ಲೂಕುಗಳಲ್ಲಿ ಸಮುದಾಯದ ಜನರಿದ್ದಾರೆ. ತುಮಕೂರು, ಚಿತ್ರದುರ್ಗ, ಮೈಸೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಮೊದಲಾದ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆ ಇದೆ. ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ 2 ಲಕ್ಷ ಮೀರಿದ ಜನಸಂಖ್ಯೆ ಇದೆ. ಯಾವ ಆಧಾರದ ಮೇಲೆ ಸಮೀಕ್ಷೆ ನಡೆಸಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮಹಾಮಂಡಲ ಗೌರವಾಧ್ಯಕ್ಷ ಗೋವಿಂದೇಗೌಡ, ಉಪಾಧ್ಯಕ್ಷ ಗೋವಿಂದರಾಜು, ಪದಾಧಿಕಾರಿಗಳಾದ ಪಟೇಲ್ ದೊಡ್ಡೇಗೌಡ, ಎಂ.ರಂಗರಾಜು, ಜಿಲ್ಲಾ ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಶ್ರೀಧರ್, ಮುಖಂಡರಾದ ತುಂಗೋಟಿ ರಾಮಣ್ಣ, ಭಕ್ತರಹಳ್ಳಿ ದೇವರಾಜು, ಅಶೋಕ್ ಕಾರ್ಪೆಹಳ್ಳಿ, ವೀರನಾಗಪ್ಪ, ಸತೀಶ್, ಲಕ್ಷ್ಮಿಕಾಂತ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.