ADVERTISEMENT

ತಾಯಿ– ಮಗಳಿಗೆ ಸಿಕ್ಕಿತು ‘ಆಸರೆ’

ಮಾನವೀಯತೆ ಮೆರೆದ ತಾಲ್ಲೂಕಿನ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 19:45 IST
Last Updated 21 ಆಗಸ್ಟ್ 2019, 19:45 IST
ಕುಣಿಗಲ್ ಮಲ್ಲಿಪಾಳ್ಯದಲ್ಲಿ ಮಳೆಯಿಂದಾಗಿ ಮನೆ ಕಳೆದುಕೊಂಡಿದ್ದ ನಂಜಮ್ಮ ಅವರಿಗೆ ಅಗತ್ಯ ಸಾಮಗ್ರಿಗಳನ್ನು ನೀಡಲಾಯಿತು. ಶಾಸಕ ಡಾ.ರಂಗನಾಥ್, ತಹಶೀಲ್ದಾರ್ ವಿಶ್ವನಾಥ್ ಮತ್ತು ಅಧಿಕಾರಿಗಳು ಇದ್ದಾರೆ
ಕುಣಿಗಲ್ ಮಲ್ಲಿಪಾಳ್ಯದಲ್ಲಿ ಮಳೆಯಿಂದಾಗಿ ಮನೆ ಕಳೆದುಕೊಂಡಿದ್ದ ನಂಜಮ್ಮ ಅವರಿಗೆ ಅಗತ್ಯ ಸಾಮಗ್ರಿಗಳನ್ನು ನೀಡಲಾಯಿತು. ಶಾಸಕ ಡಾ.ರಂಗನಾಥ್, ತಹಶೀಲ್ದಾರ್ ವಿಶ್ವನಾಥ್ ಮತ್ತು ಅಧಿಕಾರಿಗಳು ಇದ್ದಾರೆ   

ಕುಣಿಗಲ್: ಈಚೆಗೆ ಬಿದ್ದ ಮಳೆಯಿಂದಾಗಿ ಮನೆಗೋಡೆಗಳು ಬಿದ್ದು ಅಸಹಾಯಕ ಸ್ಥಿತಿಯಲ್ಲಿದ್ದ ತಾಯಿ– ಮಗಳಿಗೆ ತಾಲ್ಲೂಕಿನ ಅಧಿಕಾರಿಗಳು ಸಹಾಯಹಸ್ತ ನೀಡಿ ಮಾನವೀಯತೆ ಮೆರೆದಿದ್ದಾರೆ.

ಪಟ್ಟಣದ 22ನೇ ವಾರ್ಡ್‌ನ ಮಲ್ಲಿಪಾಳ್ಯದಲ್ಲಿ ಪುಟ್ಟ ಮನೆಯಲ್ಲಿ ತಾಯಿ ನಂಜಮ್ಮ (87), ಮಗಳು ಕೆಂಪಮ್ಮ (58) ವಾಸಿಸುತ್ತಿದ್ದರು. ಮಳೆಯಿಂದಾಗಿ ಮನೆ ಗೋಡೆ ಕುಸಿದು ಬಿದ್ದಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದರು. ತಾಯಿ ನಂಜಮ್ಮ ಅಪಘಾತದಿಂದ ಕಾಲು ಕಳೆದುಕೊಂಡಿದ್ದು, ನಡೆಯಲಾಗದ ಸ್ಥಿತಿಯಲ್ಲಿ ಇದ್ದಾರೆ. ಮನೆ ಗೋಡೆ ಬಿದ್ದ ಕಾರಣ ತಾಯಿ ಮಗಳು ದಿಕ್ಕು ತೋಚದ ಪರಿಸ್ಥಿಯಲ್ಲಿದ್ದರು.

ಈ ಭಾಗದ ಪುರಸಭೆ ಸದಸ್ಯ ಶ್ರೀನಿವಾಸ್ ಮನವಿಯ ಮೇರೆಗೆ ತಹಶೀಲ್ದಾರ್ ವಿಶ್ವನಾಥ್ ಮತ್ತು ಪುರಸಭೆ ಮುಖ್ಯಾಧಿಕಾರಿ ರಮೇಶ್, ನಂಜಮ್ಮನ ಮನೆ ಬಳಿ ಬಂದು ಅಸಹಾಯಕ ಸ್ಥಿತಿಯಲ್ಲಿದ್ದ ತಾಯಿ– ಮಗಳನ್ನು ಕಂಡು ಕ್ಷಣಕಾಲ ವಿಚಲಿತರಾದರು. ಕೂಡಲೇ ಆರೋಗ್ಯಾಧಿಕಾರಿಗೆ ಮಾಹಿತಿ ನೀಡಿದರು. ತಾಲ್ಲೂಕು ವೈದ್ಯಾಧಿಕಾರಿ ಜಗದೀಶ್ ಮತ್ತು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಗಣೇಶ್ ಬಾಬು ಸಿಬ್ಬಂದಿಯೊಂದಿಗೆ ಬಂದು ಆರೋಗ್ಯ ತಪಾಸಣೆ ನೆಡೆಸಿ ಸೂಕ್ತ ಚಿಕಿತ್ಸೆ ನೀಡಿದರು.

ADVERTISEMENT

ತಹಶೀಲ್ದಾರ್ ವಿಶ್ವನಾಥ್ ಮಾತನಾಡಿ, ನಂಜಮ್ಮ ಮತ್ತು ಕೆಂಪಮ್ಮ ಅವರಿಗೆ ಸ್ಥಳದದಲ್ಲೇ ಆಧಾರ್ ಮತ್ತು ಪಡಿತರ ಚೀಟಿ ವಿತರಣೆಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಸ್ಥಗಿತವಾಗಿರುವ ಪೆನ್ಶನ್ ನೀಡುವುದರ ಜತೆಗೆ ವೈಯುಕ್ತಿಕವಾಗಿ ಸೀರೆ ಮತ್ತು ಹೊದಿಕೆ, ಬಟ್ಟೆಗಳನ್ನು ನೀಡುವುದಾಗಿ ತಿಳಿಸಿದರು. ತಹಶೀಲ್ದಾರ್‌ರೊಂದಿಗೆ ಕೈಜೋಡಿಸಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಯಣ್ಣ, ಆಹಾರ ಸಾಮಗ್ರಿ, ದಿನನಿತ್ಯದ ಅಗತ್ಯ ವಸ್ತುಗಳನ್ನು ನೀಡಿದರು. ಪುರಸಭೆ ಮುಖ್ಯಾಧಿಕಾರಿ ರಮೇಶ್ ಗಾಲಿ ಕುರ್ಚಿ ನೀಡಿದರು.

ಶಾಸಕ ಡಾ.ರಂಗನಾಥ್ ಸಹ ಅಧಿಕಾರಿಗಳ ಮಾನವೀಯತೆಗೆ ಪ್ರಶಂಸೆ ವ್ಯಕ್ತಪಡಿಸಿ, ಕೊಳಚೆ ನಿರ್ಮೂಲನ ಮಂಡಳಿಯಿಂದ ಮನೆ ನಿರ್ಮಿಸಿಕೊಡುವಂತೆ ಸ್ಥಳದಲ್ಲಿದ್ದ ಮೇಲ್ವಿಚಾರಕರಿಗೆ ಸೂಚನೆ ನೀಡಿದರು. ತಾಯಿ ಮಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ನಾಳೆಯಿಂದಲೇ ಮನೆ ನಿರ್ಮಾಣ ಕಾರ್ಯ ಪ್ರಾರಂಭಿಸುವಂತೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.