ADVERTISEMENT

ಕುಣಿಗಲ್: ಮುಚ್ಚಲಿದ್ದ ವಸತಿ ನಿಲಯಕ್ಕೆ ಮರುಜೀವ

ಶೈಕ್ಷಣಿಕ ಪ್ರಗತಿಗೆ ದಾರಿದೀಪ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ನಿಲಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 6:12 IST
Last Updated 24 ಜೂನ್ 2025, 6:12 IST
<div class="paragraphs"><p>ಕುಣಿಗಲ್ ತಾಲ್ಲೂಕಿನ ದೊಡ್ಡಮಧುರೆ ಕಸ್ತೂರಬಾ ಗಾಂಧಿ ಬಾಲಿಕಾ ಉಚಿತ ವಸತಿ ನಿಲಯ</p></div>

ಕುಣಿಗಲ್ ತಾಲ್ಲೂಕಿನ ದೊಡ್ಡಮಧುರೆ ಕಸ್ತೂರಬಾ ಗಾಂಧಿ ಬಾಲಿಕಾ ಉಚಿತ ವಸತಿ ನಿಲಯ

   

ಕುಣಿಗಲ್: ವಿದ್ಯಾರ್ಥಿಗಳ ಕೊರತೆ, ಅನುದಾನದ ಮತ್ತು ಮೂಲ ಸೌಕರ್ಯದ ಕೊರತೆಯಿಂದ ಮುಚ್ಚಿಹೋಗುವ ಹಂತದಲ್ಲಿದ್ದ ತಾಲ್ಲೂಕಿನ ಕಸ್ತೂರಬಾ ಗಾಂಧಿ ಬಾಲಿಕಾ ಉಚಿತ ವಸತಿ ನಿಲಯವು ಗ್ರಾಮಸ್ಥರ, ಪಂಚಾಯಿತಿ ಮತ್ತು ಅಧಿಕಾರಿವರ್ಗದ ಶ್ರಮದಿಂದ ಮತ್ತೆ ಚಿಗುರಿ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗೆ ದಾರಿದೀಪವಾಗಿದೆ. 

ಅಶಕ್ತ, ವಲಸೆ ಕಾರ್ಮಿಕರ, ಅನಾಥ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಿಸುವುದರ ಜತೆಗೆ ಸಮೀಪದ ಶಾಲೆಯಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದ ಕಸ್ತೂರಬಾ ಗಾಂಧಿ ಬಾಲಿಕಾ ಉಚಿತ ವಸತಿ ನಿಲಯನ್ನು 2010ರಲ್ಲಿ ತಾಲ್ಲೂಕಿನ ಕೊತ್ತಗೆರೆಯಲ್ಲಿ ಪ್ರಾರಂಭಿಸಲಾಗಿತ್ತು. ಕೋವಿಡ್ ಸಂಕಷ್ಟದ ದಿನಗಳ ಬಳಿಕ 2022-23ರಲ್ಲಿ ತಾಲ್ಲೂಕಿನ ಗಡಿಭಾಗವಾದ ಎಡೆಯೂರು ಹೋಬಳಿ ದೊಡ್ಡಮಧುರೆ ಗ್ರಾಮದಲ್ಲಿ ನೂತನ ಕಟ್ಟಡದಲ್ಲಿ ಪ್ರಾರಂಭವಾಗಿದ್ದರೂ ಆವರಣ ಗೋಡೆ, ಮೂಲ ಸೌಕರ್ಯ, ನಿರ್ವಹಣೆ ಕೊರತೆಯಿಂದಾಗಿ ಮುಚ್ಚುವ ಹಂತಕ್ಕೆ ತಲುಪಿತ್ತು.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ ಗಮನಸೆಳೆಯುವ ಲೇಖನ ಪ್ರಕಟಿಸಿದ ನಂತರ ಗ್ರಾಮಸ್ಥರು, ಪಂಚಾಯಿತಿಯವರು, ಮಕ್ಕಳ ಆಯೋಗದ ಸದಸ್ಯ ತಿಪ್ಪೆಸ್ವಾಮಿ ಭೇಟಿನೀಡಿ ವಸತಿ ಶಾಲೆಯ ಉಳಿವಿಗೆ ವ್ಯವಸ್ಥಿತ ಕಾರ್ಯಕ್ರಮ ರೂಪಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ವಸತಿ ನಿಲಯಕ್ಕೆ ದಾಖಲಾಗಿರುವ ಹೆಣ್ಣುಮಕ್ಕಳ ಸಂಖ್ಯೆ ನೂರಕ್ಕೆ ತಲುಪಿದೆ.

ವಸತಿ ನಿಲಯ ಉಳಿವಿಗಾಗಿ ಗ್ರಾಮಸ್ಥರು ನಿರಂತರವಾಗಿ ಶ್ರಮಿಸಿದ್ದು, ದಾಖಲಾತಿ ಕುಸಿತಗೊಂಡಾಗ ಅಕ್ಕಪಕ್ಕದ ಗ್ರಾಮಗಳಿಗೆ ತೆರಳಿ ಹೆಣ್ಣು ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುವ ಸಲುವಾಗಿ ಪೋಷಕರ ಗಮನ ಸೆಳೆದರು. ಸ್ವಗ್ರಾಮ ಫೆಲೋಶಿಫ್ ಸಹಕಾರದಿಂದ ₹35 ಲಕ್ಷ ವೆಚ್ಚದಲ್ಲಿ ಅನುದಾನದಲ್ಲಿ ಆವರಣ ಗೋಡೆ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.

ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಲ್ಲಿ ಆಟದ ಮೈದಾನ, ಮೂಲ ಸೌಕರ್ಯ ಮತ್ತು ಲೇಖನ ಸಾಮಾಗ್ರಿಗಳ ವಿತರಣೆ ಮಾಡಲಾಗುತ್ತಿದೆ.

ಕಸ್ತೂರಬಾ ವಸತಿನಿಲಯಕ್ಕೆ ನೂರು ವಿದ್ಯಾರ್ಥಿಗಳಿಗೆ ಅವಕಾಶವಿದೆ. ಉತ್ತರ ಕರ್ನಾಟಕದ 40ಕ್ಕೂ ಹೆಚ್ಚು ಹೆಣ್ಣುಮಕ್ಕಳು ದಾಖಲಾಗಿರುವುದು ವಿಶೇಷ. ಮಕ್ಕಳು ಹೆಚ್ಚಾಗಿರುವ ಕಾರಣ ಮೂಲಸೌಕರ್ಯಕ್ಕೆ ಇನ್ನೂ ಹೆಚ್ಚು ಒತ್ತು ನೀಡಬೇಕಿದೆ ಎಂದು ವಾರ್ಡನ್ ತಾರಾ ತಿಳಿಸಿದರು.

ಬಾಗಲಕೋಟೆ, ಗದಗ, ರೋಣ, ವಿಜಯಪುರ, ಕೊಪ್ಪಳ, ಕಲಬುರಗಿ ಭಾಗದಿಂದ 40ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಹೆಣ್ಣು ಮಕ್ಕಳು ದಾಖಲಾಗಿದ್ದಾರೆ. ಆ ಭಾಗದಲ್ಲಿ ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ಪಡೆಯುವುದು ಕೌಟುಂಬಿಕ ಸಮಸ್ಯೆಗಳಿಂದ ಅಸಾಧ್ಯವಾಗಿದೆ. ಶಿಕ್ಷಣ ಪಡೆಯುವ ಉದ್ದೇಶದಿಂದ ಕಸ್ತೂರಬಾ ವಸತಿ ಶಾಲೆಗೆ ಪೋಷಕರು ದಾಖಲಿಸಿದ್ದಾರೆ ಎಂದು ವಿದ್ಯಾರ್ಥಿನಿ ಗಂಗವ್ವ ಶಂಕರಗೌಡ ಅಮರಗೊಳ ತಿಳಿಸಿದರು.

ತಾಲ್ಲೂಕಿನಲ್ಲಿ ಹೆಣ್ಣು ಮಕ್ಕಳ ಏಕೈಕ ಉಚಿತ ವಸತಿ ಶಾಲೆ ಇದಾಗಿದ್ದು, ರಾಜ್ಯದ ಯಾವ ಜಿಲ್ಲೆಯವರಾದರೂ ನೇರ ದಾಖಲಾತಿ ಇದೆ. ನಿಲಯದ ಆವರಣದಲ್ಲಿ 6ರಿಂದ 10 ತರಗತಿವರೆಗೆ ಉಚಿತ ಶಿಕ್ಷಣ, ಪ್ರವೇಶ ಪರೀಕ್ಷೆ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.