ಕುಣಿಗಲ್: ಜಿಲ್ಲೆಗೆ ಹೇಮಾವತಿ ನೀರು ಹರಿಸುವಲ್ಲಿ ತಾಲ್ಲೂಕಿನ ಜನಪ್ರತಿನಿಧಿ ಮತ್ತು ಜನರ ಹೋರಾಟ ಪ್ರಮುಖ ಪಾತ್ರವಹಿಸಿದ್ದರೂ, ಕುಣಿಗಲ್ ಭಾಗಕ್ಕೆ ಇನ್ನೂ ನೀರು ಹರಿಯದಿರುವುದು ವಿಷಾದನೀಯ ಎಂದು ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕದರಪುರದಲ್ಲಿ ಬುಧವಾರ ಶ್ರೀನಿವಾಸ ಸೇವಾ ಸಮಿತಿಯಿಂದ ಮಹಾಲಕ್ಷ್ಮಿ, ಪದ್ಮಾವತಿ ಮತ್ತು ಶ್ರೀನಿವಾಸ ಸ್ವಾಮಿ ಪರಿವಾರ ದೇವತೆ ದೇವಾಲಯ ಸಮುಚ್ಛಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲ್ಲೂಕಿನ ಹುಚ್ಚಮಾಸ್ತಿಗೌಡ, ವೈ.ಕೆ.ರಾಮಯ್ಯ, ಡಿ.ನಾಗರಾಜಯ್ಯ, ರಾಮಸ್ವಾಮಿಗೌಡ ಸೇರಿದಂತೆ ಜನರ ಹೋರಾಟದ ಫಲವಾಗಿ ಜಿಲ್ಲೆಗೆ ಹೇಮಾವತಿ ನೀರು ಹರಿಯುತ್ತಿದೆ. ಜಿಲ್ಲೆಗೆ 24 ಟಿಎಂಸಿ ನೀರು ಹಂಚಿಕೆಯಾಗಿದ್ದು, ತಾಲ್ಲೂಕಿಗೆ ಮೂರು ಟಿಎಂಸಿ ನೀರು ಹಂಚಿಕೆಯಾಗಿದೆ. ಸರ್ಕಾರ ಜಿಲ್ಲೆಯ ಪಾಲಿನ ನೀರನ್ನು ಮೊದಲು ಹಂಚಿಕೆ ಮಾಡಲಿ. ನಂತರ ಹೊರ ಜಿಲ್ಲೆಗೂ ನೀಡಲಿ, ಈ ವಿಷಯದಲ್ಲಿ ಯಾರದ್ದೂ ಅಭ್ಯಂತರವಿಲ್ಲ. ಲಿಂಕ್ ಕೆನಾಲ್ ವಿಚಾರದಲ್ಲಿ ಉಂಟಾಗಿರುವ ಗೊಂದಲಗಳನ್ನು ಸರ್ಕಾರ ಬಗೆಹರಿಸಬೇಕಿದೆ ಎಂದರು.
ಸಿದ್ಧಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮೀಜಿ ಮಾತನಾಡಿ, ಸದ್ಯ ಚದರಡಿ ಭೂಮಿಯ ಬೆಲೆ ಹೆಚ್ಚಾಗುತ್ತಿರುವಾಗ ಕದರಪುರದ ಕಮಲಮ್ಮ ದೇವಾಲಯಕ್ಕೆ ಒಂದೂವರೆ ಎಕರೆ ಜಮೀನು ನೀಡಿ ಧಾರ್ಮಿಕ ಕಾರ್ಯಕ್ಕೆ ಮಾದರಿಯಾಗಿದ್ದಾರೆ ಎಂದರು.
ರಾಮಕೃಷ್ಣ ಮಠದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಮಾನಸಿಕ ಸಾಂತ್ವಾನಕ್ಕೆ ಧರ್ಮ, ಅಧ್ಯಾತ್ಮಿಕ ಮೌಲ್ಯ ಅನಿವಾರ್ಯ. ಮೌಲ್ಯಗಳನ್ನು ಉಳಿಸಿಕೊಂಡು ಬೆಳೆಯುವ ಬಗ್ಗೆ ಕಾರ್ಯಪ್ರವೃತ್ತರಾಗಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಸಮಾಜವನ್ನು ಒಗ್ಗೂಡಿಸುವ ಶಕ್ತಿ ದೇವಾಲಯಗಳಿದೆ. ನಿರಂತರ ಧಾರ್ಮಿಕ ಕಾರ್ಯಕ್ರಮದ ಜತೆಗೆ ದೇವಾಲಯಗಳ ನಿರ್ವಹಣೆಗೂ ಸಮಿತಿ ಗಮನಹರಿಸಬೇಕಿದೆ ಎಂದು ಸಲಹೆ ನೀಡಿದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಅರೆ ಸಂಕರಮಠದ ಸಿದ್ದರಾಮಚೈತನ್ಯ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹೊಸಕೆರೆ ತ್ರಿಪುರಾಂತಕೇಶ್ವರ ಮಠದ ಸದಾಶಿವಾಚಾರ್ಯ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ನಿಶ್ಚಲಾನಂದನಾಥ ಸ್ವಾಮೀಜಿ, ಶಾಸಕ ರಂಗನಾಥ್, ಮಾಜಿ ಸಚಿವ ಡಿ.ನಾಗರಾಜಯ್ಯ, ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ, ಸಮಿತಿ ಧರ್ಮದರ್ಶಿ ಕೆ.ಬಿ.ಬೋರೆಗೌಡ, ಪದಾಧಿಕಾರಿಗಳಾದ ನಂಜೇಗೌಡ, ದಯಾನಂದಗೌಡ, ಆಂಜನಪ್ಪ, ಧನಂಜಯ್ಯ , ಹನುಮೇಗೌಡ, ಚಂದ್ರಹಾಸ್, ಸವಿತಾರಾಮಯ್ಯ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.