ADVERTISEMENT

ಮುಚ್ಚಿದ ತೂಬು | ತೆರವಿಗೆ ಪರಿಶೀಲನೆ: ಹೇಮಾವತಿ ನಾಲಾ ವಲಯದ ಅಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 6:34 IST
Last Updated 26 ಸೆಪ್ಟೆಂಬರ್ 2025, 6:34 IST
ಕುಣಿಗಲ್ ದೊಡ್ಡಕೆರೆಯ ರಾಮಬಾಣ ಹಂತದ ಕಾಲುವೆ ತೂಬಿನ ಸ್ಥಿತಿಯನ್ನು ಮುಳುಗು ತಜ್ಞರು ಪರಿಶೀಲಿಸಿದರು
ಕುಣಿಗಲ್ ದೊಡ್ಡಕೆರೆಯ ರಾಮಬಾಣ ಹಂತದ ಕಾಲುವೆ ತೂಬಿನ ಸ್ಥಿತಿಯನ್ನು ಮುಳುಗು ತಜ್ಞರು ಪರಿಶೀಲಿಸಿದರು   

ಕುಣಿಗಲ್: ಕುಣಿಗಲ್ ದೊಡ್ಡಕೆರೆಯ ರಾಮಬಾಣ ಹಂತದ ಕಾಲುವೆ ತೂಬನ್ನು ಹತ್ತು ವರ್ಷಗಳ ಹಿಂದೆ ಕಾಂಕ್ರಿಟ್‌ನಿಂದ ಮುಚ್ಚಲಾಗಿದ್ದು, ಹೇಮಾವತಿ ನಾಲಾ ವಲಯದ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಪರಿಶೀಲಿಸಿ ತೆರವಿಗೆ ಮುಂದಾಗಿದ್ದಾರೆ.

ದೊಡ್ಡಕೆರೆಗೆ ರಾಮಬಾಣ ಹಂತ ಮತ್ತು ಲಕ್ಷ್ಮೀದೇವಿ ಹಂತದ ಎರಡು ಕಾಲುವೆಗಳಿದ್ದು, ಸಾವಿರಾರು ಎಕರೆ ಅಚ್ಚಕಟ್ಟು ಪ್ರದೇಶವಿದೆ. ಹೇಮಾವತಿ ನಾಲಾ ನೀರು ಬರುವ ಮುನ್ನ ಮಳೆಗೆ ಕೆರೆ ತುಂಬುವುದು ಕಷ್ಟ. ನೀರು ಸಂಗ್ರಹಣೆಗಾಗಿ ಕೆಲವರು ಕೆರೆ ನೀರು ತೂಬಿನ ಮೂಲಕ ಹೋಗದಂತೆ ತಡೆಯಲು ತೂಬಿಗೆ ಕಾಂಕ್ರಿಟ್ ಸುರಿದು ಮುಚ್ಚಿದ್ದರು. ಇದರಿಂದಾಗಿ ಅಚ್ಚಕಟ್ಟುದಾರರಿಗೆ ನೀರಿಲ್ಲದೆ ಬೆಳಗಳನ್ನು ಬೆಳೆಯಲ್ಲಿ ಸಾಧ್ಯವಾಗದೆ ಕೆಲವರು ನಿವೇಶನಗಳನ್ನು ವಿಂಗಡಿಸಿ ಮಾರಾಟ ಮಾಡಿದ್ದಾರೆ.

ಕಳೆದ ಏಳು ವರ್ಷಗಳಿಂದ ಹೇಮಾವತಿ ನೀರಿನಿಂದ ದೊಡ್ಡಕೆರೆ ತುಂಬಿ ಕೋಡಿಯಾಗುತ್ತಿದ್ದರೂ, ಅಚ್ಚುಕಟ್ಟು ಪ್ರದೇಶಕ್ಕೆ ಮಾತ್ರ ನೀರು ಹರಿಸಲು ಸಾಧ್ಯವಾಗಿರಲಿಲ್ಲ. ಅಚ್ಚುಕಟ್ಟುದಾರರು ಬೆಳೆಗಳಿಗೆ ನೀರು ಹರಿಸಲು ಶಾಸಕರಿಗೆ ಮನವಿ ಮಾಡಿದ್ದರು.

ADVERTISEMENT

ಶಾಸಕರ ಸೂಚನೆ ಮೇರೆಗೆ ಹೇಮಾವತಿ ನಾಲಾವಲಯದ ಅಧಿಕಾರಿಗಳಾದ ಕಿರಣ್, ರವಿ ಸೇರಿದಂತೆ ಮುಳುಗು ತಜ್ಞರ ತಂಡ ದೊಡ್ಡಕೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.

ಎಂಜನಿಯರ್‌ ರವಿ ಮಾತನಾಡಿ, ಮುಳುಗು ತಜ್ಞರ ಮಾಹಿತಿಯಂತೆ ತೂಬನ್ನು ಕಾಂಕ್ರಿಟ್ ಗೋಡೆ ಮೂಲಕ ಮುಚ್ಚಲಾಗಿದ್ದು, ತೆರವಿನ ಕಾರ್ಯ ಮಂಗಳವಾರದಿಂದ ಪ್ರಾರಂಭವಾಗಲಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಮಾತನಾಡಿ, ಮೀನುಗಾರಿಕೆ ಗುತ್ತಿಗೆ ಪಡೆದವರ ದುರಾಸೆಯಿಂದ ತೂಬು ಮುಚ್ಚಿ, ಅವ್ಯವಸ್ಥೆ ಮಾಡಲಾಗಿದೆ. ಶಾಸಕರ ಸೂಚನೆ ಮೇರೆಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಮುಂದಿನ ದಿನಗಳಲ್ಲಿ ರಾಮಬಾಣ ಮತ್ತು ಲಕ್ಷ್ಮೀದೇವಿ ಹಂತದ ಕಾಲುವೆಗಳ ತೂಬುಗಳನ್ನು ದುರಸ್ತಿಗೊಳಿಸಿ ನಾಲೆಯಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.