ADVERTISEMENT

ಕುಣಿಗಲ್‌: ಕಣದಲ್ಲಿ ಹೊಸ ಮುಖಗಳು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 3:51 IST
Last Updated 19 ಡಿಸೆಂಬರ್ 2020, 3:51 IST
ಕುಣಿಗಲ್ ತಾಲ್ಲೂಕು ನಡೆಮಾವಿನಪುರ ಪಂಚಾಯಿತಿಗೆ ಸ್ಪರ್ಧಿಸಿರುವ ಪ್ರಮೋದ್ ಪರ ಪ್ರಚಾರ ನಡೆಸಿದ ಮಾಚಿ ಸಚಿವ ಡಿ.ನಾಗರಾಜಯ್ಯ
ಕುಣಿಗಲ್ ತಾಲ್ಲೂಕು ನಡೆಮಾವಿನಪುರ ಪಂಚಾಯಿತಿಗೆ ಸ್ಪರ್ಧಿಸಿರುವ ಪ್ರಮೋದ್ ಪರ ಪ್ರಚಾರ ನಡೆಸಿದ ಮಾಚಿ ಸಚಿವ ಡಿ.ನಾಗರಾಜಯ್ಯ   

ಕುಣಿಗಲ್: ತಾಲ್ಲೂಕಿನ ವಿವಿಧ ಗ್ರಾಮಪಂಚಾಯಿತಿಗಳಲ್ಲಿ ಎಂಜನಿಯರ್, ನಿವೃತ್ತ ಪಿಎಸ್ಐ, ಎಎಸ್ಐ ಪತ್ನಿ ಸೇರಿದಂತೆ ಯುವಕರು ಗ್ರಾಮ ಪಂಚಾಯಿತಿ ಸದಸ್ಯರಾಗಲು ಬಯಸಿ ಕಣದಲ್ಲಿದ್ದು ಗಮನ ಸೆಳೆಯುತ್ತಿದ್ದಾರೆ.

ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಶಿವಣ್ಣ ಅವರ ಮಗ ಪ್ರಮೋದ್ ಸಾಫ್ಟ್‌ವೇರ್ ಎಂಜನಿಯರ್‌ ಆಗಿದ್ದು, ಅಮೆಜಾನ್ ಉದ್ಯೋಗಿಯಾಗಿದ್ದಾರೆ. ಕೆಲಸಕ್ಕೆ ರಾಜೀನಾಮೆ ನೀಡಿ ಶಿಕ್ಷಣ ಸಂಸ್ಥೆಯೊಂದನ್ನು ಪ್ರಾರಂಭಿಸಿ ದೊಡ್ಡಪ್ಪ ಡಿ.ನಾಗರಾಜಯ್ಯ, ತಂದೆ, ಚಿಕ್ಕಪ್ಪ ಡಿ.ಕೃಷ್ಣಕುಮಾರ್ ಅವರ ರಾಜಕೀಯ ಜೀವನಕ್ಕೆ ಅಡಿಪಾಯ ಹಾಕಿಕೊಟ್ಟ ನಡೆಮಾವಿನಪುರ ಪಂಚಾಯಿತಿಗೆ ಸ್ಪರ್ಧಿಸಿದ್ದಾರೆ. ಮಾಚಿ ಸಚಿವ ಡಿ.ನಾಗರಾಜಯ್ಯ ಶುಕ್ರವಾರ ನಡೆಮಾವಿನ‍ಪುರಕ್ಕೆ ತೆರಳಿ ಪ್ರಚಾರ ನಡೆಸಿದ್ದಾರೆ.

ಭಕ್ತರಹಳ್ಳಿ ಗ್ರಾಮಪಂಚಾಯಿತಿ ಕುರುಡಿಹಳ್ಳಿ ಕ್ಷೇತ್ರದಿಂದ ಎಂಜನಿಯರ್ ಮಧು ಸ್ಪರ್ಧಿಸಿದ್ದಾರೆ. ಕೆಂಪನಹಳ್ಳಿ ಗ್ರಾಮಪಂಚಾಯಿತಿಯ ಸೊಂದಲಗೆರೆ ಕ್ಷೇತ್ರಕ್ಕೆ ಎಂಜನಿಯರ್ ರವೀಂದ್ರ ಸ್ಪರ್ಧಿಸಿದ್ದು, ರೇವಾ ವಿಶ್ವವಿದ್ಯಾಲಯದಲ್ಲಿ ಸಹಪ್ರಾಧ್ಯಾಪಕ ವೃತ್ತಿಯನ್ನು ಬಿಟ್ಟು ಕಳೆದ ಎರಡು ವರ್ಷದಿಂದ ಗ್ರಾಮದಲ್ಲಿ ಸಾವಯವ ಕೃಷಿ ಮಾಡುತ್ತಲೇ ಗ್ರಾಮರಾಜಕಾರಣಕ್ಕಾಗಿ ಸಿದ್ಧರಾಗಿ ಚುನಾವಣೆ ಕಣದಲ್ಲಿದ್ದಾರೆ.

ADVERTISEMENT

ಬಾಗೇನಹಳ್ಳಿ ಪಂಚಾಯಿತಿ ಶೆಟ್ಟಿಗೆರೆ ಕ್ಷೇತ್ರದಲ್ಲಿ ನಿವೃತ್ತ ಪಿಎಸ್ಐ ಕೆಂಪರಾಜು ಸ್ಪರ್ಧಿಸಿದ್ದಾರೆ. ಪಡವಗೆರೆ ಪಂಚಾಯಿತಿ ಬೆನವಾರ ಕ್ಷೇತ್ರದಲ್ಲಿ ಅಮೃತೂರು ಎಎಸ್ಐ ಜೈರಾಮ್ ಪತ್ನಿ ಪದ್ಮಾ ಸ್ಪರ್ಧಿಸಿ ಗಮನ ಸೆಳೆದಿದ್ದಾರೆ. ಇನ್ನೂ ಹೇರೂರು ಗ್ರಾಮಪಂಚಾಯಿತಿಯಲ್ಲಿ ಐಬಿಎಂ ಉದ್ಯೋಗಿ ಸೋಮಶೇಖರ್ ವರ್ಕ್ ಫ್ರರ್ಮ್‌ ಹೋಮ್ ಕಾರ್ಯನಿರ್ವಹಿಸುತ್ತಲೇ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ತಾಲ್ಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಜ್ಞಾನಭಾರತಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಕೊತ್ತಗೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಹುಲಿಯೂರು ದುರ್ಗದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಅಲ್ಲಾಬಕ್ಷ್ 3ನೇ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದರೆ, ಪತ್ನಿ ತಬಸುಮ್ ಫಾತಿಮಾ 5 ವಾರ್ಡನಿಂದ ಕಣಕ್ಕೆ ಇಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.