ಕುಣಿಗಲ್: ತಾಲ್ಲೂಕಿನಲ್ಲಿ ಕಳೆದ ಎರಡು ವರ್ಷದಿಂದ ನರೇಗಾ ಯೋಜನೆಯಲ್ಲಿ ₹100 ಕೋಟಿಗೂ ಹೆಚ್ಚು ಅಕ್ರಮವಾಗಿದೆ. ಜಿಲ್ಲಾ ಪಂಚಾಯಿತಿ, ಒಂಬಡ್ಸ್‌ಮೆನ್‌ಗೆ ದೂರು ನೀಡಿದ್ದರೂ ಸಮರ್ಪಕ ತನಿಖೆ ನಡೆಸಲು ವಿಫಲರಾಗಿದ್ದಾರೆ. ಹೀಗಾಗಿ ಕೇಂದ್ರ ಸಚಿವರಿಗೆ ದೂರು ನೀಡಿ ತನಿಖೆಗೆ ಮನವಿ ಮಾಡುವುದಾಗಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರೇಗಾ ಯೋಜನೆ ತಾಲ್ಲೂಕಿನಲ್ಲಿ ಗುತ್ತಿಗೆದಾರ, ಕಾಂಗ್ರೆಸ್ ಶಾಸಕರ, ಬೆಂಬಲಿಗರ ಪರವಾದ ಯೋಜನೆಯಾಗಿದೆ. ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳಿಂದ ಎರಡು ವರ್ಷದಲ್ಲಿ ನೂರು ಕೋಟಿಗೂ ಹೆಚ್ಚಿನ ಅಕ್ರಮ ನಡೆದಿವೆ ಎಂದರು.
ತಾಲ್ಲೂಕಿನ ಡಿ.ಹೊಸಹಳ್ಳಿ, ಕೊಡವತ್ತಿ, ಹುಲಿಯೂರುದುರ್ಗ, ಯಡೆಯೂರು ಗ್ರಾಮ ಪಂಚಾಯಿತಿಗಳಲ್ಲಿ ಬದು ನಿರ್ಮಾಣ, ಕಟ್ಟೆಗಳ ಪುನಶ್ಚೇತನ ಸೇರಿದಂತೆ ವೈಯಕ್ತಿಕ, ಸಮುದಾಯಾಧಾರಿತ ಕಾಮಗಾರಿಗಳಲ್ಲಿ ಒಂದೇ ರೀತಿಯ ಭಾವಚಿತ್ರ ದಾಖಲಿಸಿ ಅಕ್ರಮವೆಸಗಿದ್ದಾರೆ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಇಒ, ಜಿಲ್ಲಾ ಪಂಚಾಯಿತಿ ಅಧಿಕಾರಿಗೆ, ಸಾಮಾಜಿಕ ಲೆಕ್ಕ ಪರಿಶೋಧನ ವರದಿ ನೀಡಿದ್ದರೂ ಕೆಲವೆಡೆ ಒಂಬಡ್ಸಮೆನ್ ಅಧಿಕಾರಿಗಳು ಏನೂ ಆಗಿಲ್ಲ, ಎಲ್ಲ ಸಮರ್ಪಕವಾಗಿದೆ ಎಂದು ನಮೂದಿಸಿದ್ದಾರೆ ಎಂದರು.
ತನಿಖೆ ನಡೆಸಿ ಕ್ರಮಕೈಗೊಳ್ಳಲು ಅಸಮರ್ಥರಾಗಿರುವ ಕಾರಣ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಸಂಸದ ಡಾ.ಮಂಜುನಾಥ್ ಅವರ ಮೂಲಕ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಅಕ್ರಮದ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.