ADVERTISEMENT

ಶಿರಾ: ಶೇಂಗಾ ಬಿತ್ತನೆ ಪ್ರದೇಶ ಮತ್ತಷ್ಟು ಕುಗ್ಗುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 14:06 IST
Last Updated 2 ಜುಲೈ 2025, 14:06 IST
ಶಿರಾ ತಾಲ್ಲೂಕಿನಲ್ಲಿ ಬಿತ್ತನೆಗೆ ಸಿದ್ಧಗೊಂಡ ಜಮೀನು 
ಶಿರಾ ತಾಲ್ಲೂಕಿನಲ್ಲಿ ಬಿತ್ತನೆಗೆ ಸಿದ್ಧಗೊಂಡ ಜಮೀನು    

ಶಿರಾ: ತಾಲ್ಲೂಕಿನಲ್ಲಿ ಸಮರ್ಪಕವಾಗಿ ಮಳೆಯಾಗದ ಕಾರಣ ಬಿತ್ತನೆ ಕುಂಠಿತಗೊಂಡಿದೆ. 

ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 44,500 ಹೆಕ್ಟೇರ್ ಬಿತ್ತನೆ ಗುರಿಯಿದ್ದು, ಈವರೆಗೆ 8,965 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಶೇ 20.15ರಷ್ಟು ಮಾತ್ರ ಬಿತ್ತನೆಯಾಗಿದೆ. ಶೇ 60ರಿಂದ 70 ಭಾಗದಷ್ಟು ಉಳುಮೆ ಮಾಡಲಾಗಿದೆ. 

ಮೋಡದ ವಾತಾವರಣ ಇದ್ದು, ಮಳೆ ಬಾರದೆ ರೈತರು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ, ಮತ್ತೊಂದು ಕಡೆ ಮಳೆ‌ ಇಲ್ಲದೆ ಬೆಳೆ ಬಾಡುತ್ತಿದೆ.

ADVERTISEMENT

ಬಿತ್ತನೆ ಬೀಜ: ಭತ್ತ, ರಾಗಿ, ಮುಸುಕಿನ ಜೋಳ, ತೊಗರಿ, ಅಲಸಂದೆ, ಹೆಸರು ಮತ್ತು ಶೇಂಗಾ ಬಿತ್ತನೆ ಬೀಜವನ್ನು ಐದು ರೈತ ಸಂಪರ್ಕ ಕೇಂದ್ರಗಳು ಹಾಗೂ ಎರಡು ಹೆಚ್ಚುವರಿ ಮಾರಾಟ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲಾಗುತ್ತಿದೆ. ಇದರ ಜೊತೆಗೆ ತಾಲ್ಲೂಕಿನಲ್ಲಿ ಈವರೆಗೆ 3,546 ಮೆಟ್ರಿಕ್‌ ಟನ್ ರಸಗೊಬ್ಬರ ದಾಸ್ತಾನು ಇದ್ದು, ಅದರಲ್ಲಿ 1,285 ಮೆಟ್ರಿಕ್‌ ಟನ್ ರಸಗೊಬ್ಬರ ವಿತರಿಸಲಾಗಿದೆ.

ಶೇಂಗಾದಿಂದ ಹಿಮ್ಮುಖ: ತಾಲ್ಲೂಕಿನಲ್ಲಿ ಶೇಂಗಾ ಪ್ರಮುಖ ಬೆಳೆಯಾಗಿದ್ದು, 23,200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರೈತರು ಶೇಂಗಾ ಬೆಳೆಯಿಂದ ಹಿಮ್ಮುಖರಾಗುತ್ತಿದ್ದು, ಅಡಿಕೆಗೆ ಒತ್ತು ನೀಡಿದ್ದಾರೆ. ಇದರ ಜೊತೆಗೆ ಕೆಲವು ರೈತರು ಹತ್ತಿ ಬಿತ್ತನೆ ಮಾಡಿದ್ದಾರೆ. ಶೇಂಗಾಗೆ ಖರ್ಚು ಹೆಚ್ಚು ಬರುತ್ತಿದ್ದು ಖರ್ಚು ಮಾಡಿದಷ್ಟೂ ಆದಾಯ ಬರದಿರುವುದರಿಂದ ರೈತರು ಶೇಂಗಾ ಬಿಟ್ಟು ಪರ್ಯಾಯ ಬೆಳೆಗಳ‌ ಕಡೆ ಮುಖ ಮಾಡಿದ್ದಾರೆ. ಈಗ ಮಳೆ ಕೊರತೆಯೂ ಎದುರಾಗಿರುವುದರಿಂದ ಈ ಬಾರಿ ಶೇಂಗಾ ಬಿತ್ತನೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.

‘ಕೆಲವೆಡೆ ಶೇಂಗಾವನ್ನು ಈಗಾಗಲೇ ಬಿತ್ತನೆ ಮಾಡಿದ್ದು, ಹೂವು ಬಿಡುವ ಹಂತದಲ್ಲಿದೆ. ಮಳೆ ಇಲ್ಲದೆ ಗಿಡ ಬಾಡುತ್ತಿವೆ. ಈ ಬಾರಿ ಉತ್ತಮ ಮಳೆಯಾಗುವುದು ಎಂದು ಹವಾಮಾನ ಇಲಾಖೆ ವರದಿಗಳನ್ನು ನಂಬಿ ಸಾಲ ಮಾಡಿ ಶೇಂಗಾ ಬಿತ್ತನೆ ಮಾಡಿದ್ದು, ಈಗ ನೋಡಿದರೆ ಮಳೆ ಇಲ್ಲ ಮುಂದೆ ಏನಾಗಬಹುದು ಎನ್ನುವ ಚಿಂತೆ ಮೂಡಿದೆ’ ಎಂದು ರೈತ ರಾಮಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.