ADVERTISEMENT

ಚಿಕ್ಕನಾಯಕನಹಳ್ಳಿ: ಭೂಸ್ವಾಧೀನ ಪ್ರಕ್ರಿಯೆ ಗೊಂದಲ ಪರಿಹಾರ

ಅಗಸರಹಳ್ಳಿಗೆ ಹೇಮಾವತಿ ವಿಶೇಷ ಭೂಸ್ವಾಧೀನಾಧಿಕಾರಿ ಮಂಜುಳಾ ಭೇಟಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:28 IST
Last Updated 29 ಜನವರಿ 2026, 6:28 IST
<div class="paragraphs"><p>ರೈತರು</p></div>

ರೈತರು

   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕುಡಿಯುವ ನೀರಿನ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಳ್ಳಲಾದ ಜಮೀನುಗಳ ಪರಿಹಾರ ವಿತರಣೆಯಲ್ಲಿನ ಗೊಂದಲಗಳನ್ನು ಹಂತ ಹಂತವಾಗಿ ಬಗೆಹರಿಸುತ್ತಿದ್ದು, ಹೇಮಾವತಿ ನಾಲೆ ಕಾಮಗಾರಿ ಶೀಘ್ರ ಪುನರಾರಂಭಿಸಲಾಗುವುದು ಎಂದು ಹೇಮಾವತಿ ವಿಶೇಷ ಭೂಸ್ವಾಧೀನಾಧಿಕಾರಿ ಮಂಜುಳಾ ತಿಳಿಸಿದರು.

ತಾಲ್ಲೂಕಿನ ಅಗಸರಹಳ್ಳಿಯಲ್ಲಿ ಹೇಮಾವತಿ ನಾಲಾ ಕಾಮಗಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಐದು ಎಕರೆ ಜಮೀನಿನಲ್ಲಿ ತಕರಾರು ಉಂಟಾಗಿ ಕಾಮಗಾರಿಗೆ ಅಡ್ಡಿಯುಂಟಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ರೈತರ ಮನವೊಲಿಸಿದ್ದಾರೆ.

ADVERTISEMENT

ತಾಲ್ಲೂಕಿನ ಕುಡಿಯುವ ನೀರಿನ ಯೋಜನೆಗಾಗಿ ಒಟ್ಟು 154 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಕೆಲವು ರೈತರ ಕುಟುಂಬಗಳಲ್ಲಿನ ಆಂತರಿಕ ವ್ಯಾಜ್ಯ ಹಾಗೂ ಪರಿಹಾರದ ಮೊತ್ತ ನಿಗದಿಯಲ್ಲಿನ ಗೊಂದಲಗಳಿಂದಾಗಿ ಕಾಮಗಾರಿಗೆ ಅಡ್ಡಿಯಾಗಿತ್ತು. ಇಂದು ಅಗಸರಹಳ್ಳಿಯಲ್ಲಿನ ರೈತರೊಂದಿಗೆ ಸಮಾಲೋಚಿಸಿದ್ದೇವೆ. ರೈತರು ತಮ್ಮ ಗೊಂದಲಗಳನ್ನು ಬಗೆಹರಿಸಿಕೊಂಡಿದ್ದು, ಕಾಮಗಾರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಭೂಮಿ ಬಿಟ್ಟುಕೊಟ್ಟ ರೈತರು ಅಗತ್ಯ ದಾಖಲೆಗಳೊಂದಿಗೆ ಹೇಮಾವತಿ ನಾಲಾ ಕಚೇರಿಗೆ ಅರ್ಜಿ ಸಲ್ಲಿಸಿದರೆ, ನಿಗದಿಪಡಿಸಿದ ಪರಿಹಾರ ಮೊತ್ತವನ್ನು ಅವರ ಖಾತೆಗೆ ಪಾವತಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಅಗಸರಹಳ್ಳಿಯ ರೈತ ಷಡಕ್ಷರಿ ಮಾತನಾಡಿ, ‘ನಮ್ಮ ಮತ್ತು ನಮ್ಮ ಚಿಕ್ಕಪ್ಪನ ನಡುವಿನ ಜಮೀನಿನ ಆಂತರಿಕ ವ್ಯಾಜ್ಯದ ಕಾರಣದಿಂದಾಗಿ ನಾವು ಕಾಮಗಾರಿಗೆ ತಕರಾರು ಎತ್ತಿದ್ದೆವು. ಆದರೆ ಭೂಸ್ವಾಧೀನಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಮೀನನ್ನು ಬಿಟ್ಟುಕೊಡುವಂತೆ ಕೋರಿದ್ದಾರೆ. ಅವರ ಮನವಿಗೆ ಸ್ಪಂದಿಸಿ ಹೇಮಾವತಿ ನಾಲೆ ಕಾಮಗಾರಿಗೆ ನಮ್ಮ ಕಡೆಯಿಂದ ಯಾವುದೇ ಅಡ್ಡಿಪಡಿಸುವುದಿಲ್ಲ ಎಂದು ಸಮ್ಮತಿಸಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.