ADVERTISEMENT

ತುಮಕೂರು: ಕೋರ್ಟ್‌ಗೆ ಜಾಗ ಕೊಡಲು ಯಾರು ಅಡ್ಡಿ?

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 6:40 IST
Last Updated 28 ಜೂನ್ 2025, 6:40 IST
ತುಮಕೂರು ಜಿಲ್ಲಾ ನ್ಯಾಯಾಲಯ ಕಟ್ಟಡ
ತುಮಕೂರು ಜಿಲ್ಲಾ ನ್ಯಾಯಾಲಯ ಕಟ್ಟಡ   

ತುಮಕೂರು: ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಭೂಮಿ ಕೊಡಲು ಯಾರು ಅಡ್ಡಿಯಾಗಿದ್ದಾರೆ?

ಇಂತಹದೊಂದು ಪ್ರಶ್ನೆಯನ್ನು ವಕೀಲರು, ಜಿಲ್ಲಾ ಆಡಳಿತದ ಮುಂದಿಟ್ಟು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.

ಭೂಮಿ ನೀಡಲು ತೊಂದರೆಯಾದರೂ ಏನು? ಯಾವ ಕಾರಣಕ್ಕೆ ತಡ ಮಾಡಲಾಗುತ್ತಿದೆ? ಕ್ರಷರ್ ಲಾಬಿಗೆ ಮಣಿದಿದ್ದಾರೆಯೇ? ಎಂಬುದನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ವಕೀಲರು ಒತ್ತಾಯಿಸುತ್ತಿದ್ದಾರೆ.

ADVERTISEMENT

ನಗರದ ಹೊರ ವಲಯದ ಅಮಲಾಪುರ ಬಳಿ ಸರ್ಕಾರಿ ಜಾಗ ಗುರುತಿಸಿದ್ದು, ಅದನ್ನು ಮಂಜೂರು ಮಾಡಿಕೊಡುವಂತೆ ಕೇಳಿಕೊಂಡಿದ್ದರೂ ಸ್ಪಂದಿಸುತ್ತಿಲ್ಲ. ಜಿಲ್ಲಾ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆದ ಸಭೆಯಲ್ಲೇ ‘ಕ್ರಷರ್ ಇಸ್ಯೂ ಇದೆ’ ಎಂದು ಜಿಲ್ಲಾಧಿಕಾರಿ ಹೇಳುವುದನ್ನು ನೋಡಿದರೆ ಕ್ರಷರ್ ಲಾಬಿಗೆ ಮಣಿದು ಜಾಗ ಮಂಜೂರು ಮಾಡುತ್ತಿಲ್ಲ. ಅಮಲಾಪುರದ ಸುತ್ತಮುತ್ತ ಪ್ರಭಾವಿಗಳ ಕ್ಷಷರ್‌ಗಳು ಇರುವುದರಿಂದ ಒತ್ತಡಕ್ಕೆ ಮಣಿದಂತೆ ಕಾಣುತ್ತದೆ ಎಂದು ವಕೀಲರು ಆರೋಪಿಸುತ್ತಿದ್ದಾರೆ.

ಕೊರಟಗೆರೆ ರಸ್ತೆಯ ಅಮಲಾಪುರ ಸರ್ವೆ ನಂ. 31ರಲ್ಲಿ 175 ಎಕರೆ ಸರ್ಕಾರದ ಜಾಗವಿದೆ. ಕೇಂದ್ರೀಯ ವಿದ್ಯಾಲಯ ಸೇರಿದಂತೆ ವಿವಿಧ ಉದ್ದೇಶಗಳಿಗೆ 67 ಎಕರೆ ಮಂಜೂರು ಮಾಡಲಾಗಿದೆ. ಅದರಲ್ಲಿ ಕೇಂದ್ರದ ಸೂಕ್ಷ್ಮ, ಸಣ್ಣ, ಮಧ್ಯಮ ಟೆಕ್ನಾಲಜಿ ಸೆಂಟರ್ (ಎಂಎಸ್‌ಎಂಇ) ನಿರ್ಮಾಣಕ್ಕೆ 15 ಎಕರೆ ಜಾಗ ಮಂಜೂರು ಮಾಡಲಾಗಿತ್ತು. ನಂತರದ ದಿನಗಳಲ್ಲಿ ಈ ಯೋಜನೆ ಕೈಬಿಡಲಾಗಿದ್ದು, ಭೂಮಿಯನ್ನು ವಾಪಸ್ ಮಾಡಲಾಗಿದೆ. ಈ ಜಾಗವನ್ನು ಜಿಲ್ಲಾ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಿಕೊಡುವಂತೆ ಒತ್ತಾಯ ಮಾಡುತ್ತಿದ್ದರೂ ಸ್ಪಂದನೆ ಇಲ್ಲವಾಗಿದೆ ಎಂಬ ಅಸಮಾಧಾನ ನ್ಯಾಯಾಂಗ ಇಲಾಖೆಯಿಂದ ವ್ಯಕ್ತವಾಗುತ್ತಿದೆ.

ಶಿರಾ ಗೇಟ್‌ನ ಕ್ರಿಶ್ಚಿನ್ ಕಾಲೇಜು ಸಮೀಪ ಸರ್ಕಾರದ ಜಾಗವಿದ್ದು, ಅದನ್ನಾದರೂ ಮಂಜೂರು ಮಾಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಬೇಡಿಕೆ ಏಕೆ?: ನಗರದ ಹೃದಯ ಭಾಗದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯ ಸಂಕೀರ್ಣ ಇದೆ. ಒಂದು ಕಡೆ ಉಪನೋಂದಣಾಧಿಕಾರಿ ಕಚೇರಿ, ಕೃಷಿ ಇಲಾಖೆ, ಕಾರ್ಮಿಕ ಇಲಾಖೆ ಕಚೇರಿ ಸೇರಿದಂತೆ ಇತರೆ ಕಟ್ಟಡಗಳು ಇದ್ದು, ವಿಪರೀತ ಜನದಟ್ಟಣೆಯಿಂದಾಗಿ ಇಲ್ಲಿ ಓಡಾಡುವುದೇ ದುಸ್ತರವಾಗಿದೆ.

ನ್ಯಾಯಾಲಯದ ಕಟ್ಟಡದಲ್ಲಿ ಜಿಲ್ಲಾ ಮಟ್ಟದ 21 ಕೋರ್ಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಸ್ಥಳಾವಕಾಶ ಸಾಲದಾಗಿದೆ. ಒಂದೆಡೆ ಎರಡು ಮೂರು ಕೋರ್ಟ್ ಕಲಾಪ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಹೊಸದಾಗಿ ಮಂಜೂರಾಗಿರುವ ಕೋರ್ಟ್‌ಗಳ ಕಲಾಪ ಎಲ್ಲಿ ನಡೆಸುವುದು ಎಂಬ ಚಿಂತೆ ನ್ಯಾಯಾಧೀಶರನ್ನು ಕಾಡುತ್ತಿದೆ.

ಸುಮಾರು 1,800 ವಕೀಲರು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ ಒಂದು ಸಾವಿರದಷ್ಟು ಮಂದಿ ನಿತ್ಯ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸುತ್ತಾರೆ. ಜಿಲ್ಲಾ ನ್ಯಾಯಾಲಯಗಳಲ್ಲಿ 38 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇದ್ದು, ನಿತ್ಯ ಸಾವಿರಾರು ಪ್ರಕರಣಗಳ ವಿಚಾರಣೆ ನಡೆಯುತ್ತದೆ. ಪ್ರತಿ ತಿಂಗಳು ಹೊಸದಾಗಿ ಸುಮಾರು 1,500 ಪ್ರಕರಣಗಳು ಸೇರ್ಪಡೆಯಾಗುತ್ತಿವೆ. ವಕೀಲರು, ಕಕ್ಷಿದಾರರು, ಸಾಕ್ಷಿದಾರರು, ಅವರ ಜೊತೆಯವರು ಸೇರಿದಂತೆ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಜನರು ಬರುತ್ತಾರೆ. ಕೋರ್ಟ್‌ ಕಾರ್ಯದ ನಿಮಿತ್ತ ಬರುವ ಸಾವಿರಾರು ಮಂದಿ ತಮ್ಮ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶವೇ ಇಲ್ಲವಾಗಿದೆ. ಪುಟ್ಟ ಜಾಗದಲ್ಲಿ ಇಷ್ಟೊಂದು ಸಂಖ್ಯೆಯ ಜನರು ನಿಲ್ಲಲೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ನ್ಯಾಯಾಧೀಶರು, ವಕೀಲರು, ಸಾರ್ವಜನಿಕರು ನಿತ್ಯವೂ ಕಿರಿಕಿರಿ ಅನುಭವಿಸುತ್ತಿದ್ದಾರೆ. ಇದರಿಂದ ಬೇಸತ್ತ ವಕೀಲರು ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶ ನೀಡಬೇಕು ಎಂಬ ಬೇಡಿಕೆಯನ್ನು ಜಿಲ್ಲಾ ಆಡಳಿತದ ಮುಂದೆ ಮಂಡಿಸುತ್ತಾ ಬಂದಿದ್ದಾರೆ. ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಬಿ.ಜಯಂತಕುಮಾರ್‌, ವಕೀಲರ ಸಂಘದ ಪ್ರಮುಖರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಎರಡು ವಾರದಲ್ಲಿ ಕ್ರಮ ವಹಿಸುವುದಾಗಿ ಹೇಳಿದ್ದರೂ ಈವರೆಗೂ ನಿರ್ಧಾರ ಹೊರ ಬಿದ್ದಿಲ್ಲ.

ಅಮಲಾಪುರದಲ್ಲಿ ಎಂಎಸ್‌ಎಂಇ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡುವ ಮುನ್ನ ಸರ್ವೆ ಸೇರಿದಂತೆ ಅಗತ್ಯ ಕೆಲಸಗಳು ಪೂರ್ಣಗೊಂಡಿದ್ದವು. ಈಗ ಹೊಸದಾಗಿ ಏನನ್ನೂ ಮಾಡುವ ಅಗತ್ಯವಿಲ್ಲ. ಮೊದಲಿಗೆ ಈ 20 ಎಕರೆ ಜಾಗ ಮಂಜೂರು ಮಾಡಬೇಕು. ನಂತರ ಹೆಚ್ಚುವರಿ ಭೂಮಿ ನೀಡಲಿ ಎಂದು ವಕೀಲರು ಒತ್ತಾಯಿಸಿದ್ದಾರೆ.

ವಕೀಲರ ಮನವಿಯನ್ನು ಪರಿಗಣಿಸಿದ ಉಪಲೋಕಾಯುಕ್ತರು, ಜಾಗ ಮಂಜೂರು ಮಾಡಿಕೊಡುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ. ಆದರೂ ಸ್ಪಂದಿಸುತ್ತಿಲ್ಲ. ಜಿಲ್ಲಾಧಿಕಾರಿಗೆ ನೀಡಿದ ಗಡುವು ಮುಗಿಯುತ್ತಾ ಬಂದಿದ್ದು, ಜುಲೈನಲ್ಲಿ ಹೋರಾಟ ತೀವ್ರಗೊಳಿಸಲು ವಕೀಲರು ಸಜ್ಜಾಗಿದ್ದಾರೆ.

ಕಲಾಪ ಬಹಿಷ್ಕಾರ
ವಕೀಲರನ್ನು ಜಿಲ್ಲಾಧಿಕಾರಿ ಮಲತಾಯಿ ಧೋರಣೆಯಿಂದ ನೋಡುತ್ತಿದ್ದಾರೆ. 2021ರಿಂದ ಜಾಗ ಕೇಳುತ್ತಿದ್ದರೂ ಸ್ಪಂದಿಸುತ್ತಿಲ್ಲ. ಅವರು ಕೊಟ್ಟಿರುವ ಗಡುವು ಜುಲೈ 2ಕ್ಕೆ ಮುಗಿಯಲಿದೆ. ಅಷ್ಟರಲ್ಲಿ ನಿರ್ಧಾರ ತಿಳಿಸದಿದ್ದರೆ ನಂತರ ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿ ನ್ಯಾಯಾಲಯದ ಕಲಾಪ ಬಹಿಷ್ಕರಿಸಲಾಗುವುದು- ಎಚ್.ಕೆಂಪರಾಜಯ್ಯ ಅಧ್ಯಕ್ಷ ಜಿಲ್ಲಾ ವಕೀಲರ ಸಂಘ
ಸಿಗದ ಸ್ಪಂದನೆ
ಪ್ರಸ್ತುತ ಕೋರ್ಟ್ ಆವರಣದಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ. ಜಾಗ ಮಂಜೂರು ಮಾಡುವಂತೆ ಉಪ ಲೋಕಾಯುಕ್ತರು ಆದೇಶಿಸಿದ್ದಾರೆ. ಅಮಲಾಪುರದ ಬಳಿ ಭೂಮಿ ಮಂಜೂರು ಮಾಡಿಕೊಡಲು ಜಿಲ್ಲಾಧಿಕಾರಿ ಸ್ಪಂದಿಸುತ್ತಿಲ್ಲ. ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದು ಅನಿವಾರ್ಯ-ಎಂ.ಎಲ್.ರವಿಗೌಡ ಉಪಾಧ್ಯಕ್ಷ ಜಿಲ್ಲಾ ವಕೀಲರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.