ADVERTISEMENT

ನ್ಯಾಯಾಲಯ ಸಂಕೀರ್ಣಕ್ಕೆ ಭೂಮಿ ನೀಡಲು ನಿರ್ಲಕ್ಷ್ಯ: ಹೋರಾಟಕ್ಕೆ ವಕೀಲರು ಸಜ್ಜು

ಭೂಮಿ ಮಂಜೂರಾತಿಗೆ ಇಂದು ಅಂತಿಮ ಗಡುವು

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 5:33 IST
Last Updated 16 ಜುಲೈ 2025, 5:33 IST
ತುಮಕೂರು ಜಿಲ್ಲಾ ನ್ಯಾಯಾಲಯ
ತುಮಕೂರು ಜಿಲ್ಲಾ ನ್ಯಾಯಾಲಯ   

ತುಮಕೂರು: ತಾಲ್ಲೂಕಿನ ಅಮಲಾಪುರದ ಬಳಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಭೂಮಿ ನೀಡಲು ನಿರ್ಲಕ್ಷ್ಯ ತೋರುತ್ತಿರುವ ಜಿಲ್ಲಾ ಆಡಳಿತದ ವಿರುದ್ಧ ಬೃಹತ್‌ ಹೋರಾಟ ನಡೆಸಲು ವಕೀಲರು ಮುಂದಾಗಿದ್ದಾರೆ.

ಈ ಬಗ್ಗೆ ಸಾಕಷ್ಟು ಬಾರಿ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಆದರೆ ಈವರೆಗೂ ನಿರ್ಧಾರ ಕೈಗೊಂಡಿಲ್ಲ. ಭೂಮಿ ನೀಡುವ ಬಗ್ಗೆ ಜುಲೈ 16ರಂದು ಸಂಜೆವರೆಗೆ ಅಂತಿಮ ಗಡುವು ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಬಿ.ಜಯಂತಕುಮಾರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ADVERTISEMENT

10 ಎಕರೆ ಜಾಗ ಮಂಜೂರಾತಿ ಪತ್ರದ ಜತೆಗೆ ಸಭೆಗೆ ಹಾಜರಾಗಿದ್ದ ಎನ್‌.ತಿಪ್ಪೇಸ್ವಾಮಿ ಅವರನ್ನು ವಕೀಲರು ತರಾಟೆಗೆ ತೆಗೆದುಕೊಂಡರು.

‘ನ್ಯಾಯಾಲಯದ ಸಂಕೀರ್ಣ ನಿರ್ಮಾಣಕ್ಕೆ 20 ಎಕರೆ ಜಾಗ ಕೇಳಲಾಗಿದೆ. ಜಿಲ್ಲಾಧಿಕಾರಿ ಉದ್ದೇಶ ಪೂರ್ವಕವಾಗಿ ನ್ಯಾಯಾಂಗದ ಹಾದಿ ತಪ್ಪಿಸುತ್ತಿದ್ದಾರೆ. ಅವರಿಗೆ ತಿಳಿಸಿದ ನಂತರ ನಿಗದಿಪಡಿಸಿದ ಸಭೆಗೆ ಗೈರಾಗುವ ಮೂಲಕ ನ್ಯಾಯಾಂಗಕ್ಕೆ ಅವಮಾನ ಎಸಗಿದ್ದಾರೆ. ನ್ಯಾಯಾಲಯಕ್ಕೆ ಕನಿಷ್ಠ ಗೌರವ ತೋರುತ್ತಿಲ್ಲ’ ಎಂದು ವಕೀಲರು ಸಿಡಿಮಿಡಿಗೊಂಡರು.

‘ಜಿಲ್ಲಾ ಆಡಳಿತ ಒಂದು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಜುಲೈ 17ರಿಂದ ಜಿಲ್ಲಾಧಿಕಾರಿ, ಎಲ್ಲ ಉಪವಿಭಾಗಾಧಿಕಾರಿ ನ್ಯಾಯಾಲಯಗಳನ್ನು ಬಹಿಷ್ಕರಿಸಿ, ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು. ಎಷ್ಟಾದರೂ ಪ್ರಕರಣ ದಾಖಲಿಸಲಿ. ಕಾನೂನು ಸಂಘರ್ಷ ಉಂಟಾದರೆ ಜಿಲ್ಲಾಧಿಕಾರಿಯೇ ನೇರ ಹೊಣೆ ಹೊರಬೇಕಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿ.ಜಯಂತಕುಮಾರ್‌ ಮಾತನಾಡಿ, ‘ಎಂಎಸ್‌ಎಂಇಗೆ ಮೀಸಲಿಟ್ಟಿದ್ದ 15 ಎಕರೆ, ವಿಜ್ಞಾನ ಕೇಂದ್ರದ 5 ಎಕರೆ ಸೇರಿ 20 ಎಕರೆ ಕೇಳಲಾಗಿತ್ತು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಭೂಮಿ ಕೇಳುತ್ತಿದ್ದೇವೆ, ನಮ್ಮ ಸ್ವಂತಕ್ಕಲ್ಲ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಇಂತಹ ಸ್ಥಿತಿ ಇಲ್ಲ’ ಎಂದರು.

ಜಿಲ್ಲಾ ಸಂಕೀರ್ಣ ನಿರ್ಮಾಣವಾದರೆ ಈಗಿರುವ ಕಟ್ಟಡವನ್ನು ಕಂದಾಯ ಇಲಾಖೆ ಬಿಟ್ಟು ಕೊಡಲಾಗುವುದು. ನಗರದ ವಿವಿಧ ಕಡೆಗಳಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬಹುದು. ಇದರಿಂದ ಎಲ್ಲ ಸೇವೆಗಳು ಒಂದೇ ಕಡೆ ಸಿಗುತ್ತವೆ. ಭೂಮಿ ಕೊಡಲು ಜಿಲ್ಲಾ ಆಡಳಿತ ಒಪ್ಪದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ವಕೀಲರು ಎಚ್ಚರಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜಯ್ಯ, ಉಪಾಧ್ಯಕ್ಷ ರವಿಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ಹಿರೇಹಳ್ಳಿ, ವಕೀಲರಾದ ಸಿ.ಕೆ.ಮಹೇಂದ್ರ, ಬಿ.ಜಿ.ನಾಗರಾಜ್‌, ಶಿವಕುಮಾರ್‌, ಎಂ.ಬಿ.ಬಸವರಾಜ್‌, ಎಂ.ಬಿ.ನವೀನ್‌ಕುಮಾರ್‌, ಸಿಂಧೂರಿ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.