ADVERTISEMENT

ಕಾಡು ಹಂದಿ ಬೇಟೆಗೆ ಹಾಕಿದ್ದ ಉರುಳಿಗೆ ಬಿದ್ದು ಚಿರತೆ ಸಾವು

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 19:45 IST
Last Updated 9 ಜೂನ್ 2019, 19:45 IST
ಉರುಳಿಗೆ ಬಿದ್ದು ಮೃತಪಟ್ಟಿರುವ ಚಿರತೆ
ಉರುಳಿಗೆ ಬಿದ್ದು ಮೃತಪಟ್ಟಿರುವ ಚಿರತೆ   

ತಿಪಟೂರು: ಈಚನೂರು ಸಮೀಪದ ಲೋಕೇಶ್ ಎಂಬುವರ ತೋಟದಲ್ಲಿ ಕಾಡು ಹಂದಿಯ ಬೇಟೆಗೆಂದು ಹಾಕಿದ್ದ ಉರುಳಿಗೆ ಸಿಲುಕಿ ಸುಮಾರು ನಾಲ್ಕು ವರ್ಷದ ಚಿರತೆ ಮೃತಪಟ್ಟಿದೆ.

ಶುಕ್ರವಾರ ರಾತ್ರಿ ಉರುಳಿಗೆ ಸಿಕ್ಕಿದ್ದ ಇದು ಶನಿವಾರ ಮಧ್ಯಾಹ್ನದವರೆಗೂ ಬಿಡಿಸಿಕೊಳ್ಳಲು ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ತಿಳಿಸಿದರು. ಹಾಸನದಿಂದ ಅರವಳಿಕೆ ತಜ್ಞರನ್ನು ಕರೆಸಿ ಚಿರತೆ ರಕ್ಷಿಸುವ ಪ್ರಯತ್ನ ನಡೆದರೂ ಅದು ಫಲ ನೀಡಲಿಲ್ಲ. ವಲಯ ಅರಣ್ಯಾಧಿಕಾರಿ ರಾಕೇಶ್ ನೇತೃತ್ವದಲ್ಲಿ ವೈದ್ಯರ ಸಮಕ್ಷಮ ತಾಲ್ಲೂಕಿನ ಚೌಡ್ಲಾಪುರ ಅರಣ್ಯ ಪ್ರದೇಶದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಚಿರತೆಯನ್ನು ದಹನ ಮಾಡಲಾಯಿತು. ತೋಟದ ಮಾಲೀಕ ನೆನ್ನೆಯಿಂದ ನಾಪತ್ತೆ ಆಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ.

‘ಹಂದಿ ಹಿಡಿಯುವವರು ಉರುಳು ಹಾಕಿರಬಹುದು. ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಜಮೀನಿನ ಮಾಲೀಕರು ತಪ್ಪಿಸಿಕೊಳ್ಳುವ ಹಾಗಿಲ್ಲ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ವನ್ಯ ಜೀವಿಗಳು ಯಾರ ತೋಟ ಅಥವಾ ಜಮೀನಿನಲ್ಲಿ ಮೃತಪಟ್ಟಿರುತ್ತವೋ ಅದಕ್ಕೆ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ರಾಕೇಶ್ ತಿಳಿಸಿದ್ದಾರೆ.

ADVERTISEMENT

ವನ್ಯಮೃಗಗಳ ಬೇಟೆ ತಾಲ್ಲೂಕಿನಲ್ಲಿ ಹೆಚ್ಚಿದೆ. ಇದಕ್ಕಾಗಿ ಹಲವು ಕಡೆಗಳಲ್ಲಿ ಉರುಳು ಅಳವಡಿಸಲಾಗುತ್ತಿದೆ. ಬೇಟೆಯ ಬಗ್ಗೆ ಅರಣ್ಯ ಇಲಾಖೆ ಈ ಬಗ್ಗೆ ಮೌನವಹಿಸಿದೆ. ಬೇಟೆ ನಿಗ್ರಹ ದಳದ ಸಿಬ್ಬಂದಿಯನ್ನು ರಸ್ತೆ ಬದಿಯ ಗಿಡಗಳನ್ನು ಹಾಕಲು ಬಳಸಿಕೊಳ್ಳುತ್ತಿದ್ದಾರೆ ಎಂದು ತಾಲ್ಲೂಕಿನ ವನ್ಯಜೀವಿ ಪ್ರೇಮಿಗಳು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.