ADVERTISEMENT

ಗಂಡಸಾದರೆ ನನ್ನ ಎದುರು ಗೆಲ್ಲಲಿ: ಎಚ್‌ಡಿಕೆ ವಿರುದ್ಧ ತೊಡೆ ತಟ್ಟಿದ ಶ್ರೀನಿವಾಸ್

ಕುಮಾರಸ್ವಾಮಿ ಊಸರವಳ್ಳಿ: ಜೆಡಿಎಸ್ ಶಾಸಕನ ಕಿಡಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 15:53 IST
Last Updated 11 ಜೂನ್ 2022, 15:53 IST
 ಶಾಸಕ ಎಸ್.ಆರ್.ಶ್ರೀನಿವಾಸ್
ಶಾಸಕ ಎಸ್.ಆರ್.ಶ್ರೀನಿವಾಸ್    

ತುಮಕೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಜೆಡಿಎಸ್ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ತಮ್ಮ ಪಕ್ಷದ ಮುಖಂಡ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅವನು ಉತ್ತಮನಾ, ಅವನು ಯಾವುದರಲ್ಲಿ ಉತ್ತಮನೆಂದು ಹೇಳಲಿ. ಬೆಳಿಗ್ಗೆ ಒಂದು ಹೇಳುತ್ತಾನೆ, ಸಂಜೆ ಮತ್ತೊಂದು ಹೇಳುತ್ತಾನೆ. ಊಸರವಳ್ಳಿ ಇದ್ದಂತೆ’ ಎಂದು ನಿಂದಿಸಿದರು.

ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಶ್ರೀನಿವಾಸ್ ಮತ ಹಾಕಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು, ಕುಮಾರಸ್ವಾಮಿ ಹರಿಹಾಯ್ದಿದಿದ್ದರು. ಅಡ್ಡ ಮತದಾನ ಖಂಡಿಸಿ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿರುವ ಮನೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು. ಇದಕ್ಕೆ ಪ್ರತಿಯಾಗಿ ಶ್ರೀನಿವಾಸ್ ಟೀಕಾ ಪ್ರಹಾರ ನಡೆಸಿದ್ದಾರೆ.

ADVERTISEMENT

‘ಇನ್ನು ಮುಂದೆ ನೋಡಲಿ, ಎಲ್ಲವನ್ನೂ ಬಿಚ್ಚಿಡುತ್ತೇನೆ. ಯಾವುದರಲ್ಲಿ ಪರಿಶುದ್ಧವಾಗಿ ಇದ್ದಾನೆ. ಕಚ್ಚೆ ಸರಿ ಇಲ್ಲ, ಬಾಯಿ ಸರಿ ಇಲ್ಲ. ಇನ್ನೊಬ್ಬರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಇವನ ವಿರುದ್ಧ ಹೋರಾಟ ಮಾಡುವುದು ನನ್ನ ಮುಂದಿನ ನಡೆ. ನಾನು ಸೋತರೂ ಪರವಾಗಿಲ್ಲ. ಇವನ ಅಭ್ಯರ್ಥಿಯನ್ನು ಗೆಲ್ಲುವುದಕ್ಕೆ ಬಿಡುವುದಿಲ್ಲ. ಅವನು ಗಂಡಸಾದರೆ ನನ್ನ ಎದುರು ನಿಂತು ಗೆದ್ದು ತೋರಿಸಲಿ. ಆಗ ನನ್ನ ಜೀವನಪೂರ್ತಿ ಅವರ ಮನೆಯಲ್ಲಿ ಕೂಲಿ ಮಾಡುತ್ತೇನೆ’ ಎಂದು ಗುಡುಗಿದರು.

‘ಕುಮಾರಸ್ವಾಮಿಗೆ ಪಕ್ಷ ನಡೆಸುವ ಯೋಗ್ಯತೆ ಇಲ್ಲ. ಅವನು ನನ್ನ ಮನೆ ಮುಂದೆ ಪ್ರತಿಭಟನೆ ಮಾಡಲು ಕಳುಹಿಸಿದ್ದಾನೆ. ನಾನು ಮತ ಪತ್ರವನ್ನು ಸರಿಯಾಗಿಯೇ ತೋರಿಸಿದ್ದೇನೆ. ಹೆಬ್ಬೆಟ್ಟಿನಿಂದ ಮುಚ್ಚಿಟ್ಟುಕೊಂಡಿರಲಿಲ್ಲ. ಮೂರು ನಾಲ್ಕು ನಿಮಿಷ ಹಿಡಿದುಕೊಂಡು ತೋರಿಸಿದೆ. ಅದಾದ ನಂತರ ಹೋಗಿ ಮತ ಪೆಟ್ಟಿಗೆಗೆ ಹಾಕಿದ್ದೇನೆ. ಅವನೇನು ಕತ್ತೆ ಕಾಯುತ್ತಿದ್ದನಾ? ಹೆಬ್ಬೆಟ್ಟು ತೆಗಿ ಅನ್ನಬೇಕಿತ್ತು’ ಎಂದು ಪ್ರಶ್ನಿಸಿದರು.

‘ಅವನನ್ನು ಯಾರಾದರೂ ಲೀಡರ್ ಅಂಥ ಹೇಳುತ್ತಾರೆಯೆ? ನಾನು ಬಿಜೆಪಿಯನ್ನು ಪ್ರಾರಂಭದಿಂದಲೂ ವಿರೋಧ ಮಾಡಿಕೊಂಡು ಬಂದಿದ್ದೇನೆ. ನಾನೇ ಆಪರೇಷನ್ ಕಮಲ ನಿಲ್ಲಿಸಿದ್ದೆ. ಮತ ಹಾಕಿದ್ದರೆ ಕಾಂಗ್ರೆಸ್‌ಗೆ ಹಾಕಿರುತ್ತೇನೆ. ನಾನೇನು ಇವನಿಗೆ ಹೆದರಿಕೊಳ್ಳಬೇಕೆ? ಕ್ಷೇತ್ರದಲ್ಲಿ ನನ್ನ ವಿರುದ್ಧ ಅಭ್ಯರ್ಥಿಯನ್ನು ಘೋಷಿಸಿದ ಮೇಲೆ ಹೆದರಿಕೊಳ್ಳುವುದು ಎಲ್ಲಿಂದ ಬಂತು’ ಎಂದು ಹೇಳಿದರು.

‘ಇವನು ಅನಿರೀಕ್ಷಿತವಾಗಿ ಮುಖ್ಯಮಂತ್ರಿಯಾದವನು. ಇನ್ನೊಂದು ಜನ್ಮ ಎತ್ತಿ ಬಂದರೂ ಇವನ ಪಕ್ಷಕ್ಕೆಬಹುಮತ ಬರಲ್ಲ. ಒಕ್ಕಲಿಗರನ್ನು ತುಳಿಯುವ ಒನ್ ಪಾಯಿಂಟ್ ಅಜೆಂಡಾ ಇಟ್ಟುಕೊಂಡಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಕುಮಾರಸ್ವಾಮಿ ಮನೆಯವರೇ ನಾಟಕ ಮಾಡುತ್ತಿದ್ದಾರೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಅವರೇ ತಮಗೆ ಬೇಕಾದವರಿಂದ ಅಡ್ಡ ಮತದಾನ ಮಾಡಿಸಿದ್ದಾರೆ. ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಈಗಾಗಲೇ ನನ್ನನ್ನು ಸೋಲಿಸಲು ಷಡ್ಯಂತ್ರ ಮಾಡಿದ್ದಾರೆ. ಇದು ಕೂಡ ಅದೇ ರೀತಿಯ ಷಡ್ಯಂತ್ರ. ನಾನು ಅವನಿಗೆ ಹೆದರಿಕೊಂಡು, ಬೇರೆ ಯಾರಿಗೋ ಹೆದರಿಕೊಂಡು ಹೋಗಲ್ಲ. ಯಾರಿಗೂ ಕಚ್ಚೆ ಕಟ್ಟಲ್ಲ’ ಎಂದು ಗುಡುಗಿದರು.

ಇವನ್ನು ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.