ADVERTISEMENT

ಸೌಹಾರ್ದ ಬದುಕಿಗೆ ಸಾಹಿತ್ಯ ಬುನಾದಿ: ಎಲ್.ಎನ್. ಮುಕುಂದರಾಜ್

ಸಾಹಿತ್ಯ ಅಕಾಡೆಮಿಯಿಂದ ಎಡೆಯೂರು ಸಂತೆಯಲ್ಲಿ ಕನ್ನಡ ಸಾಹಿತ್ಯ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 13:52 IST
Last Updated 14 ಜೂನ್ 2025, 13:52 IST
ಕುಣಿಗಲ್ ತಾಲ್ಲೂಕು ಎಡೆಯೂರು ಸಂತೆಯಲ್ಲಿ ‘ಸಂತೆಯಲ್ಲಿ ಕನ್ನಡ ಸಾಹಿತ್ಯ’ ಕಾರ್ಯಕ್ರಮವನ್ನು ಎಲ್.ಎನ್.ಮುಕುಂದರಾಜ್ ಉದ್ಘಾಟಿಸಿದರು
ಕುಣಿಗಲ್ ತಾಲ್ಲೂಕು ಎಡೆಯೂರು ಸಂತೆಯಲ್ಲಿ ‘ಸಂತೆಯಲ್ಲಿ ಕನ್ನಡ ಸಾಹಿತ್ಯ’ ಕಾರ್ಯಕ್ರಮವನ್ನು ಎಲ್.ಎನ್.ಮುಕುಂದರಾಜ್ ಉದ್ಘಾಟಿಸಿದರು   

ಕುಣಿಗಲ್: ಸಾಮಾನ್ಯ ಕನ್ನಡಿಗನನ್ನು ಕುವೆಂಪು ‘ಶ್ರೀ ಸಾಮಾನ್ಯ- ಜಗತ್ತಿಗೆ ಮಾನ್ಯ’ ಎಂದು ಸಾರಿದರು. ಶ್ರೀಸಾಮಾನ್ಯನಿಗೆ ಕನ್ನಡ ಸಾಹಿತ್ಯದ ಆಸಕ್ತಿ ಮೂಡಿಸಲು ಸಾಹಿತ್ಯ ಅಕಾಡೆಮಿಯಿಂದ ಜಾತ್ರೆ ಮತ್ತು ಸಂತೆಯಲ್ಲಿ ಕನ್ನಡ ಸಾಹಿತ್ಯ ಕಾರ್ಯಕ್ರಮ ರೂಪಿಸಿದೆ ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ತಿಳಿಸಿದರು.

ತಾಲ್ಲೂಕಿನ ಎಡೆಯೂರು ಸಂತೆಯಲ್ಲಿ ಶುಕ್ರವಾರ ಸಂತೆಯಲ್ಲಿ ಕನ್ನಡ ಸಾಹಿತ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಪಕ್ವ, ಉದಾತ್ತ ಕನ್ನಡಿಗರ ಮನಸ್ಸನ್ನು ಸರಿಯಾದ ರೀತಿಯಲ್ಲಿ ರೂಪಿಸಿಕೊಡದ ಕಾರಣ ಭಾಷೆ ಬಗ್ಗೆ ನಿರಾಸಕ್ತರಾಗುತ್ತಿದ್ದಾರೆ. ಸೌಹಾರ್ದಯುತ ಬದುಕು ಕಟ್ಟಿಕೊಡಲು ಸಾಹಿತ್ಯವೇ ಮುಖ್ಯ ಎಂದರು. 

ADVERTISEMENT

ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಜಿ.ಕಪ್ಪಣ್ಣ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಉಳಿದು ಬೆಳೆಯುತ್ತಿರುವ ಜನಪದ ಕಲೆ ಜಗತ್ತಿನ ಶ್ರೇಷ್ಠ ಕಲೆ. ಅದ್ದೂರಿಯಾಗಿ ನಡೆಯುವ ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಸಾಹಿತ್ಯ ಕಾಪಾಡುವ, ಪ್ರಚಾರದ ಬಗ್ಗೆ ಮಹತ್ವ ನೀಡದೆ ದುಡ್ಡಿನ ಅಡಿಟ್ ಬಗ್ಗೆ ತೀವ್ರ ಚರ್ಚೆ ಮಾಡುವ ಬದಲು ಸಾಹಿತ್ಯಕ್ಕಾದ ಲಾಭ, ನಷ್ಟದ ಅಡಿಟ್ ಆಗಬೇಕಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ತಾಲ್ಲೂಕು ಅಧ್ಯಕ್ಷ ಕಪನಿಪಾಳ್ಯ ರಮೇಶ್, ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಕಾರ್ಯದರ್ಶಿ ಆಡಿಟರ್ ನಾಗರಾಜು, ಸಾಹಿತ್ಯ ಅಕಾಡೆಮಿ ಸದಸ್ಯೆ ಸುಮಾ ಸತೀಶ್, ಜನಪದ ಕಲಾವಿದ ಕುಣಿಗಲ್ ರಾಮಚಂದ್ರ, ಎಡೆಯೂರು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹನುಮಂತಯ್ಯ ಹಾಜರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಗಣ್ಯರನ್ನು ತಮಟೆ ವಾದ್ಯದ ಮೂಲಕ ಸಂತೆಯಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

‘ಲಿಂಗಾಯತ’ ‘ವಿಶ್ವಮಾನವ’

ಕನ್ನಡದ ಧರ್ಮ ಬಸವಣ್ಣನ ನಂತರ ವಚನ ಸಾಹಿತ್ಯವನ್ನು ಪುರುತ್ಥಾನಗೊಳಿಸಿದ ಸಿದ್ದಲಿಂಗೇಶ್ವರಸ್ವಾಮಿ ಸಾನಿಧ್ಯದಲ್ಲಿ ಕಾರ್ಯಕ್ರಮ ಪ್ರಾರಂಭಮಾಡುತ್ತಿರುವುದು ವಿಶೇಷವಾಗಿದೆ. ಲಿಂಗಾಯತ ಜಾತಿ ಅಲ್ಲ. ಮೊದಲ ಕನ್ನಡ ಧರ್ಮ. ಎರಡನೇ ಕನ್ನಡ ಧರ್ಮ ಎಂದರೆ ಕುವೆಂಪು ಅವರ ‘ವಿಶ್ವಮಾನವ ಧರ್ಮ’ ಎಂದರು.

ಕನ್ನಡ ಸಾಹಿತ್ಯ ಅಮೂಲ್ಯವಾಗಿದೆ. ಯುವ ಜನರಿಗೆ ಸಾಹಿತ್ಯಾಸಕ್ತಿ ಮೂಡಿಸಲು ಸಾಹಿತಿಗಳು ಸರಳ ಮತ್ತು ಸಂಕ್ಷಿಪ್ತ ರೂಪದಲ್ಲಿ ಸಾಹಿತ್ಯವನ್ನು ಅರ್ಥೈಸಬೇಕಿದೆ
-ಡಾ.ರಂಗನಾಥ್, ಶಾಸಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.