ADVERTISEMENT

ಯಥಾಸ್ಥಿತಿಯತ್ತ ತುಮಕೂರು ನಗರ

ಲಾಕ್‌ಡೌನ್ ಸಡಿಲಗೊಳಿಸಿದ ಮೊದಲ ದಿನವೇ ಸಹಜ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 8 ಮೇ 2020, 14:36 IST
Last Updated 8 ಮೇ 2020, 14:36 IST
ಸದಾಶಿವ
ಸದಾಶಿವ   

ತುಮಕೂರು: ನಗರದಲ್ಲಿ ಲಾಕ್‌ಡೌನ್ ಸಡಿಲಿಸಿದ ಪರಿಣಾಮ ಜನಜೀವನ ಹಾಗೂ ವಹಿವಾಟು ಶುಕ್ರವಾರ ಸಾಮಾನ್ಯ ಸ್ಥಿತಿಯಲ್ಲಿ ಇತ್ತು. ಕೊರೊನಾ ಸೋಂಕಿನ ಪೂರ್ವದಲ್ಲಿ ಜನಜೀವನ ಹಾಗೂ ಸಂಚಾರ ಯಾವ ರೀತಿಯಲ್ಲಿ ಇತ್ತೋ ಅದೇ ಸ್ಥಿತಿ ಕಂಡು ಬಂದಿತು.

ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳಲ್ಲದೆ ಬಟ್ಟೆ ಅಂಗಡಿ, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳು ಹೀಗೆ ವಿವಿಧ ಅಂಗಡಿಗಳು ಬಾಗಿಲು ತೆರೆದಿದ್ದವು.

ಲಾಕ್‌ಡೌನ್ ಪರಿಣಾಮ ರಸ್ತೆಗಳ ಬದಿಯಲ್ಲಿ ವಾಹನಗಳನಿಲುಗಡೆಯ ಸದ್ದೇ ಇರಲಿಲ್ಲ. ಶುಕ್ರವಾರ ಎಸ್‌.ಎಸ್.ಪುರಂ, ಎಸ್‌ಐಟಿ, ಎಂ.ಜಿ.ರಸ್ತೆ, ಬಿ.ಎಚ್.ರಸ್ತೆ, ಶೆಟ್ಟಿಹಳ್ಳಿ ಮುಖ್ಯರಸ್ತೆ ಹೀಗೆ ಬಹುತೇಕ ಕಡೆಗಳ ರಸ್ತೆ ಬದಿಯಲ್ಲಿ ವಾಹನಗಳು ನಿಲುಗಡೆಯಾಗಿದ್ದವು. ಮಂಡಿಪೇಟೆ ಸೇರಿದಂತೆ ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿ ಜನರ ಸಂಚಾರ ಯಥಾಪ್ರಕಾರವಾಗಿತ್ತು.

ADVERTISEMENT

ಗೃಹೋಪಯೋಗಿ ವಸ್ತುಗಳ ಮಾರಾಟ ಮತ್ತು ಮಿಕ್ಸಿ, ಕುಕ್ಕರ್ ರಿಪೇರಿ ಅಂಗಡಿಗಳ ಬಳಿ ಹೆಚ್ಚಿನ ಜನಸಂದಣಿ ಇತ್ತು. ಲಾಕ್‌ಡೌನ್ ಅವಧಿಯಲ್ಲಿ ಕೆಟ್ಟಿದ್ದ ಕುಕ್ಕರ್, ಮಿಕ್ಸಿಗಳ ರಿಪೇರಿಗೆ ಜನರು ಅವುಗಳನ್ನು ಹೊತ್ತು ತಂದಿದ್ದರು. ಗೃಹೋಪಯೋಗಿ ಅಂಗಡಿಗಳಿಗೆ ಮೊದಲ ದಿನ ಒಳ್ಳೆಯ ವ್ಯಾಪಾರ ಆಯಿತು.

ನಗರದ ಶಿವಕುಮಾರ ಸ್ವಾಮೀಜಿ ವೃತ್ತ, ಕಾಂಗ್ರೆಸ್ ಕಚೇರಿ ಎದುರು, ಟೌನ್‌ಹಾಲ್, ಕಾಲ್‌ಟೆಕ್ಸ್, ಗುಬ್ಬಿಗೇಟ್, ಕೋತಿತೋಪು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ಪೊಲೀಸರು ತೆರವುಗೊಳಿಸಿದ್ದರು. ಬೆಳಿಗ್ಗೆಯಿಂದಲೇ ರಸ್ತೆಗಳಲ್ಲಿ ಹೆಚ್ಚಿನ ಜನರ ಓಡಾಟ ಇತ್ತು. ಬಾಗಿಲು ಮುಚ್ಚಿದ್ದ ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳು ತೆರೆದಿದ್ದವು.

ಎಂ.ಜಿ ರಸ್ತೆಗೆ ಕಳೆ

ಹೆಚ್ಚು ವಹಿವಾಟು ನಡೆಯುವ ಮತ್ತು ಅಂಗಡಿಗಳಿರುವ ಎಂ.ಜಿ.ರಸ್ತೆ ನಗರಕ್ಕೆ ಒಂದು ಕಳೆ. ತುಮಕೂರಿನಲ್ಲಿ ಹೊರಗಿನಿಂದ ಜನರು ಬಟ್ಟೆ ಇತ್ಯಾದಿ ವಸ್ತುಗಳ ಖರೀದಿಗೆ ಬಂದರೆ ಮೊದಲು ಎಡತಾಕುವುದು ಸಹ ಇದೇ ರಸ್ತೆಗೆ. ಇಷ್ಟು ದಿನ ಭಣಗುಡುತ್ತಿದ್ದ ರಸ್ತೆಯಲ್ಲಿ ಶುಕ್ರವಾರ ಜನಸಂದಣಿ ಇತ್ತು.

ಬಹುತೇಕ ಅಂಗಡಿಗಳ ಮಾಲೀಕರು, ಕೆಲಸದವರು ಮಾಸ್ಕ್‌ಗಳನ್ನು ಧರಿಸಿದ್ದರು. ಗ್ರಾಹಕರೂ ಮಾಸ್ಕ್ ಧರಿಸಿಯೇ ಖರೀದಿಗೆ ಮುಂದಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.