ADVERTISEMENT

ತುಮಕೂರು| ಫೆ.8 ರಂದು ರಾಷ್ಟ್ರೀಯ ಲೋಕ್ ಅದಾಲತ್

ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ರಾಜಿ ಸಂಧಾನಗಳ ಮೂಲಕ ಪ್ರಕರಣಗಳ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 15:55 IST
Last Updated 23 ಜನವರಿ 2020, 15:55 IST
ಹಂಚಾಟೆ ಸಂಜೀವಕುಮಾರ್
ಹಂಚಾಟೆ ಸಂಜೀವಕುಮಾರ್   

ತುಮಕೂರು: ಬಾಕಿಯಿರುವ ಪ್ರಕರಣಗಳನ್ನು ತ್ವರಿತ ಹಾಗೂ ಉಚಿತವಾಗಿ ಇತ್ಯರ್ಥಪಡಿಸುವ ಸಲುವಾಗಿ ಫೆ.8ರಂದು ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ್ ತಿಳಿಸಿದರು.

ಕಳೆದ ಸೆಪ್ಟೆಂಬರ್‌ನಲ್ಲಿ ಜಿಲ್ಲೆಯಲ್ಲಿ ಜರುಗಿದ ಲೋಕ್ ಅದಾಲತ್‍ನಲ್ಲಿ ಬಾಕಿಯಿರುವ ಪ್ರಕರಣಗಳ ಪೈಕಿ 3926 ಹಾಗೂ ನ್ಯಾಯಾಲಯಕ್ಕೆ ದಾಖಲಾಗದೇ ಇರುವಂತಹ 460 ಪೂರ್ವ ವ್ಯಾಜ್ಯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅದಕ್ಕೂ ಮುನ್ನ 2019ರ ಜುಲೈನಲ್ಲಿ ಜರುಗಿದ ಲೋಕ್ ಅದಾಲತ್‍ನಲ್ಲಿ 1246 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗಾದರೂ ಅನ್ಯಾಯವಾಗಿದ್ದಲ್ಲಿ, ತನ್ನ ಆರ್ಥಿಕ ಅಥವಾ ಇತರೆ ದೌರ್ಬಲ್ಯಗಳ ಕಾರಣದಿಂದಾಗಿ ನ್ಯಾಯ ಪಡೆಯುವಲ್ಲಿ ವಂಚಿತರಾಗಬಾರದು ಎಂಬುದು ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶವಾಗಿದೆ. ಅದಕ್ಕಾಗಿ ಪ್ರತಿ ವರ್ಷ ರಾಷ್ಟ್ರ, ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟಗಳಲ್ಲಿ ವರ್ಷಕ್ಕೆ 5 ರಾಷ್ಟ್ರೀಯ ಲೋಕ್ ಅದಾಲತ್‍ಗಳನ್ನು ನಡೆಸಲಾಗುತ್ತಿದೆ. ಪ್ರತಿ ವರ್ಷದಲ್ಲಿ ಫೆಬ್ರವರಿ, ಏಪ್ರಿಲ್, ಜುಲೈ, ಸೆಪ್ಟೆಂಬರ್ ಮತ್ತು ಡಿಸೆಂಬರ್‌ನಲ್ಲಿ ಈ ಅದಾಲತ್ ನಡೆಸಲಾಗುವುದು. 2020 ವರ್ಷದ ಮೊದಲನೇ ಲೋಕ್ ಅದಾಲತ್ ಫೆ.8ರಂದು ತುಮಕೂರಿನಲ್ಲಿ ನಡೆಯಲಿದೆ ಎಂದರು.

ADVERTISEMENT

ಅದಾಲತ್‌ನ ಉಪಯೋಗಕ್ಕೆ ಸಲಹೆ: ಜಿಲ್ಲೆಯ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿರುವ ಕಕ್ಷಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಈ ಲೋಕ್ ಅದಾಲತ್‍ನಲ್ಲಿ ಭಾಗವಹಿಸಿ, ತಮ್ಮ ಪ್ರಕರಣಗಳನ್ನು ರಾಜಿ ಸಂಧಾನ ಮತ್ತು ಪರಸ್ಪರ ಒಪ್ಪಂದ ಮೇರೆಗೆ ಇತ್ಯರ್ಥಪಡಿಸಿಕೊಳ್ಳಲು ಮುಂದೆ ಬರಬೇಕು. ಇದಕ್ಕೆ ವಕೀಲರು, ಕಕ್ಷಿದಾರರು ಸಹಕಾರ ನೀಡುವ ಮೂಲಕ ಈ ಲೋಕ್ ಅದಾಲತ್‍ನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಕೆ.ಅನಿಲ್‍ಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಆರ್.ದೇವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.