ADVERTISEMENT

ಕಾಡುಗೊಲ್ಲರ ಮೇಲೆ ಮಮಕಾರ!

ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ: ನಿರ್ಣಾಯಕ ಸಮುದಾಯದ ಮೇಲೆ ಪಕ್ಷಗಳ ಕಣ್ಣು

ಡಿ.ಎಂ.ಕುರ್ಕೆ ಪ್ರಶಾಂತ
Published 27 ಸೆಪ್ಟೆಂಬರ್ 2020, 2:21 IST
Last Updated 27 ಸೆಪ್ಟೆಂಬರ್ 2020, 2:21 IST
ಚಂದ್ರಶೇಖರಗೌಡ
ಚಂದ್ರಶೇಖರಗೌಡ   

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಕಾಡುಗೊಲ್ಲ ಸಮುದಾಯದ ಮೇಲೆ ಪ್ರಮುಖವಾಗಿ ದೃಷ್ಟಿ ಹರಿಸಿವೆ. ಅದರಲ್ಲಿಯೂ ಕಾಂಗ್ರೆಸ್ ಮತ್ತು ಬಿಜೆಪಿ ಈಗಾಗಲೇ ಈ ಸಮುದಾಯದ ವಿಚಾರದಲ್ಲಿ ತಮ್ಮದೇ ಆದ ದಾಳಗಳನ್ನು ಉರುಳಿಸುತ್ತಿವೆ.

ಕುರುಬ ಸಮುದಾಯದ ಜೆಡಿಎಸ್‌ನ ಲತಾ ರವಿಕುಮಾರ್ ಅವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ಕಾಡುಗೊಲ್ಲ ಸಮುದಾಯದ ಗುಬ್ಬಿ ತಾಲ್ಲೂಕಿನ ಅಳಿಲುಘಟ್ಟ ಜಿ.ಪಂ ಕ್ಷೇತ್ರದ ಸದಸ್ಯೆ ಯಶೋದಮ್ಮ ಅವರನ್ನು ಕೂರಿಸಲು ಬಿಜೆಪಿ ಮುಂದಾಗಿದೆ. ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಈರಣ್ಣ ಅವರನ್ನು ನೇಮಿಸಿದೆ.

ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು, ಕಾಡುಗೊಲ್ಲ ಸಮುದಾಯದ ಸಾಸಲು ಡಾ.ಸತೀಶ್ ಅವರನ್ನು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ADVERTISEMENT

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಡುಗೊಲ್ಲ ಸಮುದಾಯದ 30 ಸಾವಿರಕ್ಕೂ ಹೆಚ್ಚು ಮತಗಳಿವೆ. ಕುಂಚಿಟಿಗ ಸಮುದಾಯ ಹೊರತುಪಡಿಸಿದರೆ ಈ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇದೆ. ಫಲಿತಾಂಶದ ಮೇಲೆ ಪ್ರಭಾವ ಬೀರುವ ಶಕ್ತಿ ಹೊಂದಿದೆ. ಸಮುದಾಯದ ಬಿ.ಕೆ.ಬಡೀರಣ್ಣ ಒಮ್ಮೆ ಬಿಜೆಪಿ ಹಾಗೂ ಎರಡು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಕಳೆದ ಬಾರಿ
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಎಂ.ನಾಗರಾಜು ಬಂಡಾಯವಾಗಿ ಸ್ಪರ್ಧಿಸಿ 14 ಸಾವಿರ ಮತಗಳನ್ನು ಪಡೆದಿದ್ದರು.

ಜೆಡಿಎಸ್‌ನಲ್ಲಿ ಸಮುದಾಯದ ಚೆಂಗವಾರ ಮಾರಣ್ಣ, ನಾದೂರು ಜಿ.ಪಂ ಸದಸ್ಯೆ ಗಿರಿಜಮ್ಮ ಶ್ರೀರಂಗಯಾದವ್, ಕಾಂಗ್ರೆಸ್‌ನಲ್ಲಿ ತಾ.ಪಂ ಅಧ್ಯಕ್ಷ ಚಂದ್ರಣ್ಣ, ಎನ್‌.ಸಿ.ದೊಡ್ಡಯ್ಯ, ಸೋರೆಕುಂಟೆ ಸತ್ಯನಾರಾಯಣ್, ಸಿದ್ದಪ್ಪ, ಸುದರ್ಶನ್, ಬಿಜೆಪಿಯಲ್ಲಿ ಗ್ರಾಮಾಂತರ ಮೋರ್ಚಾ ಅಧ್ಯಕ್ಷ ರಂಗಸ್ವಾಮಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಹಿರಿಯೂರು ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಸಹ ಬಿಜೆಪಿ ಟಿಕೆಟ್ ಬಯಸಿದ್ದು, ಅವರಿಗೆ ವಿರೋಧಿ ಬಣವೂ ತಾಲ್ಲೂಕಿನಲ್ಲಿದೆ. ಯಾದವ ಸಮುದಾಯದ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಜುಂಜಪ್ಪನಗುಡ್ಡೆಯಲ್ಲಿ ಸಿ.ಎಂ.ನಾಗರಾಜು ಸಭೆ ನಡೆಸಿ, ಶ್ರೀನಿವಾಸ್ ಹೊರತುಪಡಿಸಿ ಯಾರಿಗೆ ಟಿಕೆಟ್ ನೀಡಿದರೂ ಅವರ ಪರ ಕೆಲಸ ಮಾಡುತ್ತೇವೆ ಎಂದು ಪ್ರಕಟಿಸಿದ್ದಾರೆ. ತಾಲ್ಲೂಕು ಬಿಜೆಪಿ ಮುಖಂಡರು ಸಹ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ.

ಈ ಹಿಂದಿನ ಚುನಾವಣೆಗಳಲ್ಲಿ ಯಾದವ ಸಮುದಾಯದವರೇ ಆದ ನೆರೆಯ ಮಡಕಶಿರಾ ಮಾಜಿ ಶಾಸಕ ಹಾಗೂ ಆಂಧ್ರಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಘುವೀರರೆಡ್ಡಿ ಕಾಂಗ್ರೆಸ್ ಪರವಾಗಿ ತಾಲ್ಲೂಕಿನಲ್ಲಿ ವ್ಯಾಪಕ ಪ್ರಚಾರ ಸಹ ನಡೆಸಿದ್ದರು. ಅವರಿಗೂ ಶಿರಾದಲ್ಲಿರುವ ತಮ್ಮ ಸಮುದಾಯದ ಸ್ವಲ್ಪ ಮಟ್ಟಿನ
ಹಿಡಿತ ಇದೆ.

ಸತೀಶ್‌ಗೆ ಟಿಕೆಟ್ ತಪ್ಪಿಸಿದ್ದ ಜಯಚಂದ್ರ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಸಲು ಸತೀಶ್ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಅವರಿಗೆ ಟಿಕೆಟ್ ತಪ್ಪಿಸಿ ಜಯಚಂದ್ರ ಪುತ್ರ ಸಂತೋಷ್‌ಗೆ ಅವಕಾಶ ನೀಡಲಾಯಿತು. ಇದು ಕಾಡುಗೊಲ್ಲ ಸಮುದಾಯದ ಅಸಮಾಧಾನಕ್ಕೂ ಕಾರಣವಾಯಿತು. ಈ ಪರಿಣಾಮ ಜಯಚಂದ್ರ ಮತ್ತು ಸಂತೋಷ್ ಪರಾಭವ ಹೊಂದಿದರು. ಈಗ ಸತೀಶ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಕಾಡುಗೊಲ್ಲ ಸಮುದಾಯವನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.