ADVERTISEMENT

ಸಾಮಾಜಿಕ ಪರಿವರ್ತನೆಗಾಗಿ ಜನಾಂದೋಲನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 15:33 IST
Last Updated 14 ಡಿಸೆಂಬರ್ 2018, 15:33 IST
ಡಾ.ಜಿ.ವೆಂಕಟೇಶ್‌
ಡಾ.ಜಿ.ವೆಂಕಟೇಶ್‌   

ತುಮಕೂರು: ಪ್ರಜಾಪ್ರಭುತ್ವದ ಉಳಿವು ಮತ್ತು ಸಾಮಾಜಿಕ ಪರಿವರ್ತನೆಗಾಗಿ ‘ಸಾಮಾಜಿಕ ಅಭಿವೃದ್ಧಿ ರಂಗ’ ಸಂಘಟನೆಯು ರಾಜ್ಯದಾದ್ಯಂತ ಜನಾಂದೋಲನ ರೂಪಿಸುತ್ತಿದೆ ಎಂದು ಕೋಲಾರ ಸಂಸದ ಡಾ.ಜಿ.ವೆಂಕಟೇಶ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬೆಂಗಳೂರು ನಗರ, ರಾಮನಗರ, ದಾವಣಗೆರೆ, ಶಿವಮೊಗ್ಗದಲ್ಲಿ ಆರಂಭಿಸಿದ್ದು, ಈಗ ತುಮಕೂರಿನಲ್ಲಿ ಆರಂಭಿಸಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಯುವಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ADVERTISEMENT

ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಒಂದು ತಿಂಗಳು ವಾಸ್ತವ್ಯ ಹೂಡಿ ಅಲ್ಲಿನ ಸಮಸ್ಯೆಗಳ ಸಮಗ್ರ ಅಧ್ಯಯನ ಹಾಗೂ ಸಾಮಾಜಿಕ ಕಳಕಳಿವುಳ್ಳ ಪ್ರಾಮಾಣಿಕರನ್ನು ಪತ್ತೆಹಚ್ಚಿ ಜನನಾಯಕರನ್ನಾಗಿ ಹೊರ ಹೊಮ್ಮುವಂತೆ ತರಬೇತಿ ಮತ್ತು ಮಾಹಿತಿ ನೀಡಲಾಗುವುದು ಎಂದರು.

ಸಂವಿಧಾನದ ಶಾಸಕಾಂಕ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಕಾರ್ಯ ವೈಖರಿಗಳಿಂದ ಸಮಾಜದ ಎಲ್ಲಾ ಕ್ಷೇತ್ರಗಳ ವ್ಯವಸ್ಥೆಗಳು ದಾರಿ ತಪ್ಪುತ್ತಿದೆ. ಹಾಗೇ ಮೌಲ್ಯಾಧಾರಿತ ಶಿಕ್ಷಣದ ಕೊರತೆ ಹಾಗೂ ಜನಪ್ರತಿನಿಧಿಗಳ ಸರಿಯಾದ ಆಯ್ಕೆ ಇಲ್ಲದ ಕಾರಣ ರಾಜ್ಯ ಮತ್ತು ರಾಷ್ಟ್ರದ ಆದಾಯದಲ್ಲಿ ಶೇ 85 ರಷ್ಟು ಪ್ರಭಾವಿ ಜನರಿಗೆ ಹಾಗೂ ಶೇ 15 ರಷ್ಟು ಆದಾಯ ಸಾಮಾನ್ಯರಿಗೆ ಸೇರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಮಾಜದಲ್ಲಿ ಇಂದು ಜಾತೀಯತೆ, ಭ್ರಷ್ಟಾಚಾರದ ನಡುವೆ ಮಾನವೀಯ ಸಂಬಂಧಗಳು ವ್ಯಾಪಾರೀಕರಣಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ರಾಮರಾಜ್ಯ ನಿರ್ಮಾಣ ಮಾಡುವುದು ಅನಿವಾರ್ಯ ಎಂದರು.

ಸಾಮಾಜಿಕ ಅಭಿವೃದ್ಧಿ ರಂಗದ ಅಧ್ಯಕ್ಷ ಟಿ.ಎಲ್.ರಂಗನಾಥ್‌ ಮಾತನಾಡಿ, ’ಇಂದು ರೈತರ ಆತ್ಮಹತ್ಯೆಗಳು, ನಿರುದ್ಯೋಗದ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ವಿರುದ್ದ ಹೋರಾಡಲು ಎಲ್ಲರೂ ಸಂಘಟಿತರಾಗಬೇಕಿದೆ’ ಎಂದು ಹೇಳಿದರು.

ಸಾಮಾಜಿಕ ಅಭಿವೃದ್ಧಿ ರಂಗದ ಕೋಶಾಧ್ಯಕ್ಷ ದ್ವಾರಕನಾಥ್‌, ಸದಸ್ಯ ಗೋವಿಂದರಾಜು ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.