ADVERTISEMENT

ತುಮಕೂರು: ಸಾಮೂಹಿಕ ಯೋಗ; ನೂರಾರು ಜನ ಭಾಗಿ

ಅಂತರರಾಷ್ಟ್ರೀಯ ಯೋಗ ದಿನಾಚರಣೆ; ಯೋಗ ಮೊರೆ ಹೋದ ಜನ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 14:46 IST
Last Updated 21 ಜೂನ್ 2025, 14:46 IST
ತುಮಕೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು
ತುಮಕೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು   

ತುಮಕೂರು: ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ನಗರ ಒಳಗೊಂಡಂತೆ ಜಿಲ್ಲೆಯಾದ್ಯಂತ ಶನಿವಾರ ಯೋಗ ಶಿಬಿರಗಳನ್ನು ಆಯೋಜಿಸಲಾಗಿತ್ತು.

ಜಿಲ್ಲಾ ಆಡಳಿತ, ವಿವಿಧ ಸಂಘ– ಸಂಸ್ಥೆಗಳು, ಶಾಲಾ– ಕಾಲೇಜು ವತಿಯಿಂದ ಯೋಗ ದಿನ ಆಚರಿಸಲಾಯಿತು. ಶಾಲಾ– ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಾಮೂಹಿಕವಾಗಿ ಯೋಗಾಭ್ಯಾಸ ನಡೆಸಿದರು. ಸೂರ್ಯನ ಉದಯಕ್ಕೂ ಮುನ್ನವೇ ಯೋಗದಲ್ಲಿ ನಿರತರಾಗಿದ್ದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಆಡಳಿತ, ಆಯುಷ್ ಇಲಾಖೆಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೂರಾರು ಜನ ಭಾಗವಹಿಸಿದ್ದರು.

ADVERTISEMENT

ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಯೋಗಾಭ್ಯಾಸಕ್ಕೆ ಚಾಲನೆ ನೀಡಿ ಮಾತನಾಡಿ, ‘ಬದುಕಿನ ಒತ್ತಡ ನಿವಾರಣೆಗೆ ಯೋಗ ಸಹಕಾರಿಯಾಗಲಿದೆ. ನಮ್ಮ ಕನಸು ನನಸಾಗಬೇಕಾದರೆ ದೃಢವಾದ ದೇಹ ಇರಬೇಕು. ಹೀಗಾಗಿ ಎಲ್ಲರು ಯೋಗಾಭ್ಯಾಸ ನಡೆಸಬೇಕು.‌ ನಮ್ಮ ದೇಶದಲ್ಲಿ ಸುಮಾರು ವರ್ಷಗಳಿಂದ ಯೋಗಾಭ್ಯಾಸ ಮಾಡಲಾಗುತ್ತಿದೆ’ ಎಂದರು.

ಪ್ರತಿ ಹಳ್ಳಿಯಲ್ಲಿ ಯೋಗದ ಕುರಿತು ಪ್ರಚಾರ ಆಗಬೇಕು, ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ. ತಾಲ್ಲೂಕು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುವ ಗುರಿ ಇದೆ. ಪ್ರತಿಯೊಬ್ಬರು ಕನಿಷ್ಠ ಅರ್ಧ ಗಂಟೆಯಾದರೂ ಯೋಗಾಭ್ಯಾಸ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಸಲಹೆ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಡಿಎಚ್‌ಒ ಡಾ.ಬಿ.ಎಂ.ಚಂದ್ರಶೇಖರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಉಮೇಶ್ ಚಂದ್ರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್‌ ಬೇಗ್, ತಹಶೀಲ್ದಾರ್‌ ರಾಜೇಶ್ವರಿ, ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಸಿ.ಗಂಗಾಧರ್‌, ಡಿಡಿಪಿಐ ಮನಮೋಹನ್, ಬಿಇಒ ಹನುಮಂತಪ್ಪ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಪರಮೇಶ್ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.