ADVERTISEMENT

ಗುಬ್ಬಿ: ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಪ‍್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಮೇ 2025, 14:13 IST
Last Updated 31 ಮೇ 2025, 14:13 IST
ಗುಬ್ಬಿ ತಾಲ್ಲೂಕಿನ ನಿಟ್ಟೂರು ಕಡೆಯಿಂದ ಸಂಕಾಪುರದ ಕಡೆಗೆ ಹೆಜ್ಜೆ ಹಾಕಿದ ಪ್ರತಿಭಟನಕಾರರು
ಗುಬ್ಬಿ ತಾಲ್ಲೂಕಿನ ನಿಟ್ಟೂರು ಕಡೆಯಿಂದ ಸಂಕಾಪುರದ ಕಡೆಗೆ ಹೆಜ್ಜೆ ಹಾಕಿದ ಪ್ರತಿಭಟನಕಾರರು   

ಗುಬ್ಬಿ(ತುಮಕೂರು): ಹೇಮಾವತಿ ನಾಲೆಯಿಂದ ‘ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌’ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಶನಿವಾರ ರೈತರು ಪ್ರತಿಭಟನೆ ನಡೆಸಿದರು.

ಹೋರಾಟ ತಡೆಯುವ ಸಲುವಾಗಿ ಕಾಮಗಾರಿ ನಡೆಯುತ್ತಿರುವ ಗುಬ್ಬಿ ತಾಲ್ಲೂಕಿನ ಡಿ.ರಾಂಪುರ, ಸಂಕಾಪುರ ಗ್ರಾಮದ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ನಿಷೇಧಾಜ್ಞೆ ಧಿಕ್ಕರಿಸಿ ಜನರು ಹೋರಾಟಕ್ಕೆ ಇಳಿದರು. ಬಿಜೆಪಿ, ಜೆಡಿಎಸ್, ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹೋರಾಟದಲ್ಲಿ ಭಾಗವಹಿಸಿದ್ದವು.

ಕುಣಿಗಲ್‌ವರೆಗೆ ಪೈಪ್‌ಲೈನ್ ಮೂಲಕ ನೀರು ಹರಿಸಿ ಅಲ್ಲಿಂದ ಮುಂದಿನ ದಿನಗಳಲ್ಲಿ ಮಾಗಡಿ, ರಾಮನಗರ ಭಾಗಕ್ಕೆ ನೀರು ಕೊಡಲಾಗುತ್ತದೆ. ಇದರಿಂದ ಜಿಲ್ಲೆಗೆ ಅನ್ಯಾಯವಾಗಲಿದ್ದು, ನೀರಿನ ಕೊರತೆಯಾಗಲಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಜನರು ಒಂದೆಡೆ ಸೇರದಂತೆ ತಡೆಯುವ ಸಲುವಾಗಿ ಎಲ್ಲ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿದ್ದರು. ಜನರು ಹೊಲ, ಗದ್ದೆಗಳ ಮೂಲಕ ನುಗ್ಗಿ ಬಂದರು. ವಶಕ್ಕೆ ಪಡೆಯುವ ಪ್ರಯತ್ನವೂ ಫಲ ನೀಡಲಿಲ್ಲ. ಬೆಂಗಳೂರು–ಹೊನ್ನಾವರ ಹೆದ್ದಾರಿ ನಿಟ್ಟೂರು, ಕಳ್ಳಿಪಾಳ್ಯ ಸಮೀಪ ರಸ್ತೆ ತಡೆದು ಪ್ರತಿಭಟಿಸಿದರು. ಟೈರ್‌ಗೆ ಬೆಂಕಿ ಹಚ್ಚಿ ಧರಣಿ ನಡೆಸಿದರು.

ನಂತರ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಕೆಲಸ ಸ್ಥಗಿತಗೊಳಿಸುವಂತೆ ಪಟ್ಟು ಹಿಡಿದರು. ಹಿಟಾಚಿ ಯಂತ್ರದಿಂದ ಗುಂಡಿಗೆ ಪೈಪ್‌, ಮಣ್ಣು ತುಂಬಿ ಕೆಲಸ ನಿಲ್ಲಿಸಿದರು. ಕೊನೆಗೂ ಹೋರಾಟಕ್ಕೆ ಮಣಿದ ಜಿಲ್ಲಾ ಆಡಳಿತ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಲು ಆದೇಶಿಸಿದೆ.

ಶಾಶ್ವತವಾಗಿ ಯೋಜನೆ ಕೈಬಿಡಬೇಕು. ಸರ್ವ ಪಕ್ಷಗಳ ನಾಯಕರ ಸಭೆ ಕರೆದು ಚರ್ಚಿಸಬೇಕು. ಕುಣಿಗಲ್ ಭಾಗಕ್ಕೆ ಪೈಪ್‌ಲೈನ್ ಮೂಲಕ ನೀರು ತೆಗೆದುಕೊಂಡು ಹೋಗಬಾರದು. ನಾಲೆ ಮೂಲಕ ಹರಿಸಬೇಕು. ಮಾಗಡಿ ತಾಲ್ಲೂಕಿಗೆ ನೀರು ಕೊಡುವುದಿಲ್ಲ ಎಂದು ಹೋರಾಟದ ನೇತೃತ್ವ ವಹಿಸಿದ್ದ ಶಾಸಕ ಬಿ.ಸುರೇಶ್‌ಗೌಡ ಒತ್ತಾಯಿಸಿದರು.

ನಿಟ್ಟೂರು ಬಳಿ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಪ್ರಮುಖರು    
ತಾಂತ್ರಿಕ ಸಮಿತಿಯು ನೀಡಿದ ವರದಿ ಆಧಾರದ ಮೇಲೆ ತುಮಕೂರಿನಲ್ಲಿ ಹೇಮಾವತಿ ಎಕ್ಸ್‌ಪ್ರೆಸ್‌ ನಾಲೆ ಕಾಮಗಾರಿಯನ್ನು ಆರಂಭಿಸಲಾಗಿದೆ. ಬಿಜೆಪಿಯು ರಾಜಕೀಯ ಕಾರಣಗಳಿಗಾಗಿ ವಿರೋಧ ಮಾಡುತ್ತಿದೆ
ಜಿ.ಪರಮೇಶ್ವರ, ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.