ADVERTISEMENT

ಸ್ವಾಮಿಗಳು ಜಾತಿಗೆ ಸೀಮಿತರಾಗದಿರಲಿ: ಶಾಸಕ ಎಸ್.ಆರ್.ಶ್ರೀನಿವಾಸ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 2:06 IST
Last Updated 9 ಫೆಬ್ರುವರಿ 2021, 2:06 IST
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಶಾಸಕ ಎಸ್.ಆರ್.ಶ್ರೀನಿವಾಸ್
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಶಾಸಕ ಎಸ್.ಆರ್.ಶ್ರೀನಿವಾಸ್   

ಗುಬ್ಬಿ: ‘ಸರ್ವ ತ್ಯಾಗ ಮಾಡಿದ ಸ್ವಾಮೀಜಿಗಳು ಒಂದು ಜಾತಿಗೆ ಮೀಸಲಾತಿ ಹೋರಾಟ ಮಾಡುವುದು ಸರಿಯಲ್ಲ. ಬಸವ, ಬುದ್ದರ ರೀತಿಯಲ್ಲಿ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಿದ್ದ ಇವರು ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿರುವುದು ವಿಷಾದನೀಯ’ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ವಾಗ್ದಾಳಿ ನಡೆಸಿದರು.

ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ಜಾತಿಗೊಂದು ನಿಗಮ ರಚನೆಯ ಭರವಸೆ ನೀಡಿದ್ದರ ಫಲವಾಗಿ ಎಲ್ಲ ಜನಾಂಗಗಳೂ ಮೀಸಲಾತಿ ಹೋರಾಟ ಆರಂಭಿಸಿವೆ. ಜಾತಿ ಮೀಸಲಾತಿ ಬಗ್ಗೆ ನಡೆದಿರುವ ಹೋರಾಟಗಳಿಗೆ ಬಿಜೆಪಿ ಸರ್ಕಾರ ಕಾರಣ. ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರ್ಗಗಳ ಸೇರ್ಪಡೆಗೆ ಒಂದೊಂದೆ ಜಾತಿಗಳು ಹೋರಾಟಕ್ಕೆ ಮುಂದಾಗಿವೆ. ಹೀಗೆ ನಡೆದರೆ ನಮ್ಮ ಸಮಾಜ ಎತ್ತ ಸಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದ ಒಟ್ಟು 25ಪಂಚಾಯಿತಿಗಳಲ್ಲಿ 19 ಪಂಚಾಯಿತಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ನಮ್ಮ ಬೆಂಬಲಿಗರ ಬಣ ಯಶಸ್ವಿಯಾಗಿದೆ. ಬಿಜೆಪಿ ಮತ್ತು ಜೆಡಿಎಸ್ ದೋಸ್ತಿ ಎಂಬ ಸಲ್ಲದ ಹೇಳಿಕೆ ಕೆಲ ಭಾಗದಲ್ಲಿ ಕೇಳಿರುವುದು ಸತ್ಯಕ್ಕೆ ದೂರ. ನಮ್ಮಲ್ಲಿ ಸ್ಪಷ್ಟ ಬಹುಮತ ಪಡೆದ 19ಪಂಚಾಯಿತಿ ಜೆಡಿಎಸ್ ಬೆಂಬಲಿತರದ್ದಾಗಿದೆ ಎಂದರು.

15 ನೇ ಹಣಕಾಸು ಯೋಜನೆಯನ್ನುಸದ್ಬಳಕೆ ಮಾಡಿಕೊಂಡು ಮುಂದಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚುನಾಯಿತ ಪ್ರತಿನಿಧಿಗಳಿಗೆ ಸೂಚಿಸಲಾಗಿದೆ. ಈ ಜತೆಗೆ ನರೇಗಾ ಯೋಜನೆಯ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಉದ್ಯೋಗ ಖಾತ್ರಿಯಲ್ಲಿ ₹9 ಸಾವಿರ ಕೋಟಿ ಕಡಿತಗೊಳಿಸಿರುವುದು ವಿಷಾದಕರ. ವಸತಿ ಸಚಿವ ಸೋಮಣ್ಣ ಅವರ ಮಾತುಗಳು ಕೇವಲ ಸುಳ್ಳಿನ ಮಾತುಗಳಾಗಿವೆ. ಅಲೆಮಾರಿಗಳಿಗೆ ಮನೆ ನೀಡಲು ಪಟ್ಟಿ ಮಾಡಿಸಿ ಇನ್ನೂ ಅಂತಿಮಗೊಳಿಸಿಲ್ಲ. ಹಿಂದಿನ ಫಲಾನುಭವಿಗಳಿಗೆ ಹಣ ನೀಡಿಲ್ಲ ಎಂದರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಚ್.ಆರ್.ಗುರುರೇಣುಕಾರಾಧ್ಯ, ಜಿ.ಪಂ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ, ಯುವ ಜೆಡಿಎಸ್ ಅಧ್ಯಕ್ಷ ಕೆ.ಆರ್.ವೆಂಕಟೇಶ್, ಮುಖಂಡ ಎಚ್.ಡಿ.ಯಲ್ಲಪ್ಪ, ಎಚ್.ಡಿ.ರಂಗಸ್ವಾಮಿ, ಪಾಳ್ಯ ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.