ADVERTISEMENT

ಯಶವಂತಪುರ–ತುಮಕೂರು ಮಾರ್ಗದಲ್ಲಿ ಡೆಮು ರೈಲು ಸಂಚಾರ ಆರಂಭ

ಯಶವಂತಪುರ–ತುಮಕೂರು ಮಾರ್ಗದಲ್ಲಿ ವಾರಕ್ಕೆ ಆರುದಿನ ಸೇವೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 18:45 IST
Last Updated 15 ಅಕ್ಟೋಬರ್ 2019, 18:45 IST
   

ತುಮಕೂರು: ಬೆಂಗಳೂರಿನ ಯಶವಂತಪುರದಿಂದ ತುಮಕೂರಿಗೆ ಸಂಪರ್ಕ ಕಲ್ಪಿಸುವ ಡೆಮು ರೈಲು ಸಂಚಾರಕ್ಕೆ ಸಂಸದ ಜಿ.ಎಸ್.ಬಸವರಾಜು ಅವರು ಹಸಿರು ಪತಾಕೆಯ ನಿಶಾನೆ ತೋರುವ ಮೂಲಕ ಮಂಗಳವಾರ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌, ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ನವದೆಹಲಿಯಿಂದ ಭಾಗಿಯಾದರು.

ನೈರುತ್ಯ ವಲಯದ ಈ ಡೆಮು(ಡೀಸೆಲ್‌ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್) ರೈಲು (ರೈಲು ಸಂಖ್ಯೆ– 76527/76528) ಭಾನುವಾರ ಹೊರತುಪಡಿಸಿ ಉಳಿದ ದಿನ ಸಂಚರಿಸಲಿದೆ. ಇದರಲ್ಲಿ ಎಂಟು ಬೋಗಿಗಳು ಇವೆ.

ADVERTISEMENT

ಸಂಚಾರ ಸಮಯ: ಯಶವಂತಪುರ ರೈಲು ನಿಲ್ದಾಣದಿಂದರಾತ್ರಿ 7.50ಕ್ಕೆ ಹೊರಟು ತುಮಕೂರು ರೈಲು ನಿಲ್ದಾಣವನ್ನುರಾತ್ರಿ 9.25ಕ್ಕೆ ತಲುಪಲಿದೆ. ಪುನಃ ರಾತ್ರಿ 9.50ಕ್ಕೆ ಹೊರಟು ಯಶವಂತಪುರ ರೈಲು ನಿಲ್ದಾಣಕ್ಕೆ 11.25ಕ್ಕೆ ತಲುಪಲಿದೆ.

ನಿಲುಗಡೆ ನಿಲ್ದಾಣಗಳು: ಕ್ಯಾತ್ಸಂದ್ರ, ಹಿರೇಹಳ್ಳಿ, ದಾಬಸ್‌ಪೇಟೆ, ನಿಡವಂದ, ದೊಡ್ಡಬೆಲೆ, ಭೈರನಾಯಕನಹಳ್ಳಿ, ಗೊಲ್ಲಹಳ್ಳಿ, ಸೋಲದೇವನಹಳ್ಳಿ, ಚಿಕ್ಕಬಾಣವರ, ಮುದ್ದಲಿಂಗನಹಳ್ಳಿ ನಿಲ್ದಾಣಗಳಲ್ಲಿ ರೈಲು ಒಂದು ಅಥವಾ ಒಂದೂವರೆ ನಿಮಿಷ ನಿಲುಗಡೆಗೊಂಡು ಸಂಚರಿಸಲಿದೆ.

ನಿಲ್ದಾಣದ ಒತ್ತುವರಿ ತೆರವು: ತುಮಕೂರು ರೈಲು ನಿಲ್ದಾಣದ ಜಾಗವನ್ನು ಸುತ್ತಲಿನವರು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆಂಬ ಆರೋಪವಿದೆ. ಆ ಒತ್ತುವರಿ ತೆರವು ಕಾರ್ಯಾಚರಣೆ ನಡೆದರೆ ಎಲ್ಲರು ಜಾಗ ಖಾಲಿ ಮಾಡಬೇಕು ಎಂದು ಸಂಸದ ಜಿ.ಎಸ್‌.ಬಸವರಾಜು ಹೇಳಿದರು.

ನಾವು ಸಹ ಏಕಾಏಕಿ ಒಕ್ಕಲೆಬ್ಬಿಸುವುದಿಲ್ಲ. ಬೇರೆ ಕಡೆ ಸೂಕ್ತ ವ್ಯವಸ್ಥೆ ಮಾಡಿ ಒತ್ತುವರಿ ತೆರವಿನ ಕಾರ್ಯ ಮುಂದುವರೆಸುತ್ತೇವೆ. ಸ್ಮಾರ್ಟ್‌ ಸಿಟಿಯಾಗುತ್ತಿರುವ ನಗರಕ್ಕೆ ಸ್ಮಾರ್ಟ್‌ ಆದ ರೈಲ್ವೆ ಜಂಕ್ಷನ್‌ ಮತ್ತು ಬಸ್‌ ನಿಲ್ದಾಣದ ಅಗತ್ಯತೆ ಇದೆ ಎಂದು ಅವರು ಪ್ರತಿಪಾದಿಸಿದರು.

ಕ್ಯಾತ್ಸಂದ್ರ, ಗುಬ್ಬಿ, ಭೀಮಸಂದ್ರದಲ್ಲಿ ಹಾದು ಹೋಗಿರುವ ರೈಲ್ವೆ ಮಾರ್ಗದ ಬಳಿ ಮೇಲ್ಸೇತುವೆ ಮತ್ತು ರೋಟಿಗರ್‌ ಸಮೀಪ ಕೇಳಸೇತುವೆ ನಿರ್ಮಿಸಲು ಬಹಳ ದಿನಗಳಿಂದ ಬೇಡಿಕೆ ಇದೆ. ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅವುಗಳನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ತುಮಕೂರಿನಿಂದ ರಾಯದುರ್ಗ, ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಚಾಮರಾಜನಗರ ಮಾರ್ಗಗಳ ಯೋಜನೆಗಳು ಅನುಷ್ಠಾನಗೊಂಡರೆ ನಮ್ಮ ನಗರ ರೈಲ್ವೆ ಜಂಕ್ಷನ್‌ ಆಗಲಿದೆ. ಅದರಿಂದ ಕೈಗಾರಿಕೆ ಮತ್ತು ವ್ಯಾಣಿಜ್ಯಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಸಂಸದರು ಅಭಿಪ್ರಾಯಪಟ್ಟರು.

ರೈಲ್ವೆ ಸಚಿವ ಪಿಯೂಷ್‌ ಗೋಯಲ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿ, ದೂರದ ಮಾರ್ಗದ ಸಂಚಾರ ಸೇವೆ ನೀಡಿದ ರೈಲುಗಳ ನಿರ್ವಹಣಾ ಕಾರ್ಯ ಮುಗಿದ ಬಳಿಕ, ಅವುಗಳನ್ನು ನಿಲ್ದಾಣದಲ್ಲೇ ಗಂಟೆಗಟ್ಟಲೇ ನಿಲ್ಲಿಸಲಾಗುತ್ತಿತ್ತು. ಈಗ ಒಂದು ರೂಪಾಯಿಯನ್ನೂ ಹೆಚ್ಚುವರಿಯಾಗಿ ಖರ್ಚು ಮಾಡದೆ, ಅಂತಹ ರೈಲುಗಳನ್ನು ಹತ್ತಿರದ ನಗರಗಳಿಗೆ ಓಡಿಸುತ್ತಿದ್ದೇವೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಸಿಗಲಿದೆ ಎಂದರು.

ಇಲಾಖೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕಕುಮಾರ್‌ ವರ್ಮಾ ಇದ್ದರು.

ಸಂಸದ ಜಿ.ಎಸ್‌.ಬಸವರಾಜು ಮತ್ತು ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಅವರು ಡೆಮು ರೈಲಿಗೆ ಚಾಲನೆ ನೀಡಿದರು. ರೈಲ್ವೆ ಇಲಾಖೆಯ ಅಧಿಕಾರಿಗಳು ಇದ್ದರು.

‘ಕೆಎಸ್‌ಆರ್‌ ವರೆಗೂ ವಿಸ್ತರಿಸಿ’

ತುಮಕೂರಿನಿಂದ ರಾತ್ರಿ ಹೊರಡುವ ಈ ಡೆಮು ರೈಲು ಯಶವಂತಪುರದ ವರೆಗೆ ಮಾತ್ರ ಸಂಚರಿಸಲಿದೆ. ಅದನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆ.ಎಸ್‌.ಆರ್‌.) ರೈಲು ನಿಲ್ದಾಣಕ್ಕೆ ವಿಸ್ತರಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ರೈಲ್ವೆ ಇಲಾಖೆಗೆ ಒತ್ತಾಯಿಸಿದರು.

ಕೆ.ಎಸ್‌.ಆರ್‌. ವರೆಗೆ ರೈಲು ಹೋದರೆ, ಅಲ್ಲಿಂದ ಬೇರೆ ಊರುಗಳಿಗೆ ಹೋಗುವವರಿಗೆ ಅನುಕೂಲ ಆಗುತ್ತದೆ ಎಂದು ಅವರು ತಿಳಿಸಿದರು.

ಈ ಡೆಮು ರೈಲು ತುಮಕೂರಿನ ನಿಲ್ದಾಣದಲ್ಲಿಯೇ ರಾತ್ರಿ ತಂಗಬೇಕು, ಬೆಳಗಿನ ಜಾವ ಬೆಂಗಳೂರಿಗೆ ಹೊರಡಬೇಕು ಎಂಬ ಬೇಡಿಕೆ ಪ್ರಯಾಣಿಕರದಾಗಿತ್ತು. ಆದರೆ, ರೈಲು ಸೇವೆ ಎಂಬುದು ರಸ್ತೆ ಸಾರಿಗೆಯಂತಲ್ಲ. ಕೆಲವೊಂದು ತಾಂತ್ರಿಕ ಸವಾಲುಗಳು ಇರುತ್ತವೆ. ಕೊನೆಯ ನಿಲ್ದಾಣದಲ್ಲಿ ರೈಲು ನಿರ್ವಹಣೆ ಸೌಕರ್ಯಗಳು ಇರಬೇಕಾಗುತ್ತದೆ. ಹಾಗಾಗಿ ನಮ್ಮ ಬೇಡಿಕೆ ಸಂಪೂರ್ಣವಾಗಿ ಈಡೇರಿಲ್ಲ ಎಂದು ಬೇಸರ ಮಾಡಿಕೊಳ್ಳಬೇಡಿ ಎಂದು ಪ್ರಯಾಣಿಕರಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.