ADVERTISEMENT

ಕಾಡುಗೊಲ್ಲರಿಂದ ಯಡಿಯೂರಪ್ಪ ಭಾವಚಿತ್ರಕ್ಕೆ ಹಾಲಿನ ಅಭಿಷೇಕ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 16:41 IST
Last Updated 30 ಸೆಪ್ಟೆಂಬರ್ 2020, 16:41 IST
ತುಮಕೂರಿನಲ್ಲಿ ಕಾಡುಗೊಲ್ಲ ಸಮುದಾಯದಿಂದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶ್‌ಗೌಡ ಅವರನ್ನು ಅಭಿನಂದಿಸಲಾಯಿತು
ತುಮಕೂರಿನಲ್ಲಿ ಕಾಡುಗೊಲ್ಲ ಸಮುದಾಯದಿಂದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶ್‌ಗೌಡ ಅವರನ್ನು ಅಭಿನಂದಿಸಲಾಯಿತು   

ತುಮಕೂರು: ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾವಚಿತ್ರಕ್ಕೆ ಬುಧವಾರ ನಗರದ ಟೌನ್‌ಹಾಲ್ ಬಳಿ ಸಮುದಾಯದಿಂದ ಹಾಲಿನ ಅಭಿಷೇಕ ನೆರವೇರಿಸಲಾಯಿತು.

ರಾಜ್ಯ ಕಾಡುಗೊಲ್ಲ ಯುವಸೇನೆ ಹಾಗೂ ಇತರ ಗೊಲ್ಲಸಂಘಗಳು ಕಾರ್ಯಕ್ರಮ ಹಮ್ಮಿಕೊಂಡಿದ್ದವು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶ್‌ಗೌಡ,ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಂಸದ ಜಿ.ಎಸ್.ಬಸವರಾಜು ಅವರನ್ನು ಅಭಿನಂದಿಸಲಾಯಿತು.

ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ ಈ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿ, ಕಾಡುಗೊಲ್ಲ ಅಭಿವೃದ್ಧಿ ನಿಗಮ ರೂಪಿಸಿ ಎಂದು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು. ನಿಗಮ ಸ್ಥಾಪನೆಗೆ ಆದೇಶಿಸಿರುವ ಮುಖ್ಯಮಂತ್ರಿ, ₹50 ಕೋಟಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ಬಿ.ಸುರೇಶ್‌ಗೌಡ ತಿಳಿಸಿದರು.

ADVERTISEMENT

ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ‘ಕಾಡುಗೊಲ್ಲರ ಮನವಿಯನ್ನು ಯಡಿಯೂರಪ್ಪ ಮನಗಂಡಿದ್ದರು. ಚಿತ್ರದುರ್ಗದ ಹೊಳಲ್ಕೆರೆ ಕ್ಷೇತ್ರದಲ್ಲಿ ಪರಿವರ್ತನಾ ಯಾತ್ರೆ ವೇಳೆ ಅಧಿಕಾರಕ್ಕೆ ಬಂದರೆ ಕಾಡುಗೊಲ್ಲ ಜನಾಂಗಕ್ಕೆ ಅಭಿವೃದ್ಧಿ ನಿಗಮ ರೂಪಿಸುವ ಭರವಸೆ ನೀಡಿದ್ದರು. ಅದರಂತೆ ಸಮುದಾಯಕ್ಕೆ ಸ್ಪಂದಿಸಿದ್ದಾರೆ’ ಎಂದು ಹೇಳಿದರು.

ಸಮುದಾಯದ ಮುಖಂಡ ಡಾ.ಶಿವಕುಮಾರಸ್ವಾಮಿ, ಶೀಘ್ರವೇ ಸಮುದಾಯವನ್ನು ಎಸ್.ಟಿ.ಗೆ ಸೇರಿಸುವ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷ ಚಂದ್ರಶೇಖರಗೌಡ, ರಾಜ್ಯ ಕಾಡುಗೊಲ್ಲ ಯುವಸೇನೆ ಅಧ್ಯಕ್ಷ ರಮೇಶ್, ಜಿಲ್ಲಾ ಘಟಕದ ಅಧ್ಯಕ್ಷ ಜಯಕೃಷ್ಣ, ಎಪಿಎಂಸಿ ಉಪಾಧ್ಯಕ್ಷ ಶಿವರಾಜು, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಈರಣ್ಣ, ಬಿಜೆಪಿ ಮುಖಂಡರಾದ ಎಸ್.ಆರ್ ಗೌಡ, ಜಗದೀಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಯಶೋದಮ್ಮ, ಸಣ್ಣಮುದ್ದಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.