ADVERTISEMENT

ಹೆಸರಿಗಿಂತ ರಾಗಿ ಬಿತ್ತನೆ ಲಾಭದಾಯಕ

ಉತ್ತಮ ಮಳೆ* ಕೃಷಿ ಚಟುವಟಿಕೆ ಚುರುಕು* ಬಿತ್ತನೆ ಆರಂಭ* ಬೀಜ, ಗೊಬ್ಬರ ಅಗತ್ಯ ದಾಸ್ತಾನು

ಪ್ರಜಾವಾಣಿ ವಿಶೇಷ
Published 29 ಮೇ 2024, 6:22 IST
Last Updated 29 ಮೇ 2024, 6:22 IST
ಕೃಷಿ ಸಹಾಯಕ ನಿರ್ದೇಶಕ ಶಿವರಾಜ್ ಕುಮಾರ್
ಕೃಷಿ ಸಹಾಯಕ ನಿರ್ದೇಶಕ ಶಿವರಾಜ್ ಕುಮಾರ್   

ಚಿಕ್ಕನಾಯಕನಹಳ್ಳಿ: ಬರ ಮತ್ತು ಮೇವಿನ ಕೊರತೆಯಿಂದ ಸಂಕಷ್ಟದಲ್ಲಿದ್ದ ತಾಲ್ಲೂಕಿನಲ್ಲಿ ಈಚೆಗೆ ಬಿದ್ದ ಉತ್ತಮ ಮಳೆ ಕೊಂಚ ಭರವಸೆ ಮೂಡಿಸಿದ್ದು, ರೈತರು ಪೂರ್ವ ಮುಂಗಾರು ಬಿತ್ತನೆಗೆ ಭೂಮಿ ಹದ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.

ಈ ಬಾರಿ ತಾಲ್ಲೂಕಿನಲ್ಲಿ ನಿರೀಕ್ಷೆಗಿಂತ (123.ಮಿ.ಮೀ) ಹೆಚ್ಚು 206 ಮಿ.ಮೀ ಮಳೆ ಸುರಿದಿದೆ. ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ. ಸಾಕಷ್ಟು ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇದೆ. 

ಮುಂಗಾರು ಬೆಳೆಯಲ್ಲಿ ರಾಗಿ ಪ್ರಮುಖ ಬೆಳೆ ಆಗಿರುವುದರಿಂದ 700 ಕ್ವಿಂಟಾಲ್ ಬಿತ್ತನೆ ಬೀಜದ ರಾಗಿ ದಾಸ್ತಾನು ಇದ್ದು, ಅಂಗಡಿಗಳಲ್ಲಿ 1,384 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲೂ ಬಿತ್ತನೆ ಬೀಜದ ರಾಗಿ ಲಭ್ಯವಿದೆ.  

ADVERTISEMENT

ರೈತರು ಅಚ್ಚುಕಟ್ಟಾಗಿ ಭೂಮಿ ಹದ ಮಾಡುವ ಜೊತೆಗೆ ವೈಜ್ಞಾನಿಕ ವಿಧಾನದಲ್ಲಿ ಬಿತ್ತನೆ ಮಾಡಿದರೆ ತಾಲ್ಲೂಕಿನಲ್ಲಿ ಉತ್ತಮ ಇಳುವರಿ ಕಾಣಬಹುದು ಎನ್ನುವ ನಿರೀಕ್ಷೆ ಇದೆ. ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಅಲಸಂದೆ ಬಿತ್ತನೆ ಆಗಿದೆ.

ಇದುವರೆಗೂ 690 ಹೆಕ್ಟೇರ್ ಹೆಸರು, 350 ಹೆಕ್ಟೇರ್ ಅಲಸಂದೆ, 25 ಹೆಕ್ಟೇರ್ ಉದ್ದು ಮತ್ತು 40 ಹೆಕ್ಟೇರ್ ತೊಗರಿ ಬಿತ್ತನೆಯಾಗಿದೆ. ಅಲಸಂದೆ ಹಾಗೂ ತೊಗರಿ ಬಿತ್ತನೆಗೆ ಇನ್ನೂ ಕಾಲಾವಕಾಶ ಇದೆ.   

ಹೆಸರು ಬಿತ್ತನೆಗಿಂತ ರಾಗಿ ಬಿತ್ತನೆ ಹೆಚ್ಚು ಲಾಭದಾಯಕ. ಜೊತೆಗೆ ತೊಗರಿ ಬಿತ್ತನೆಗೂ ಪ್ರಾಮುಖ್ಯತೆ ನೀಡಬೇಕು ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್. 

ಇದುವರೆಗೂ ಹೆಸರು ಬಿತ್ತನೆ ಮಾಡದ ರೈತರು ಈಗ ಬಿತ್ತನೆ ಮಾಡುವ ಉದ್ದೇಶ ಹೊಂದಿದ್ದರೆ ಇಲಾಖೆ, ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜ ಪಡೆಯಬಹುದು. ಇಲಾಖೆಯಲ್ಲಿ ಇಪ್ಪತ್ತು ಕ್ವಿಂಟಾಲ್ ಹೆಸರು ದಾಸ್ತಾನಿದೆ.  

ಯೂರಿಯಾ ಮತ್ತು ಡಿಎಪಿ ಗೊಬ್ಬರ ಮಾತ್ರ ಬಳಸಿದರೆ ಹೆಚ್ಚು ಲಾಭವಾಗದು. ಜೊತೆಗೆ ಬೆಳೆಗೆ ರೋಗನಿರೋಧಕ ಶಕ್ತಿ ಕೊಡುವ ಮತ್ತು ಹೆಚ್ಚಿನ ಇಳುವರಿ ದೃಷ್ಟಿಯಿಂದ ಪೊಟ್ಯಾಷ್ ರಸಗೊಬ್ಬರವನ್ನು ರೈತರು ಬಳಸುವತ್ತ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಕೃಷಿ ಆಧಾರಿತ ಚಿಕ್ಕನಾಯಕನಹಳ್ಳಿ ತಾಲ್ಲೂಕು ಭೂಪಟ

ತೊಗರಿ ಅಲಸಂದೆ ಬಿತ್ತನೆಗೆ ಸಲಹೆ

ತೊಗರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದರಿಂದ ರೈತರ ಆರ್ಥಿಕ ದೃಷ್ಟಿಯಲ್ಲೂ ಇದು ಲಾಭದಾಯಕ.ಕೃಷಿ ಇಲಾಖೆಯಲ್ಲಿ ಬಿಆರ್‌ಜಿ–1 ಬಿಆರ್‌ಜಿ–3 ಮತ್ತು ಬಿಆರ್‌ಜಿ–5 ತಳಿಯ ತೊಗರಿ ಬಿತ್ತನೆ ಬೀಜ ಲಭ್ಯವಿದೆ. 60–70 ದಿನಗಳಲ್ಲಿ ಕೊಯ್ಲಿಗೆ‌ ಬರುವ ಅಲಸಂದೆಯನ್ನು ಪೂರ್ವ ಮುಂಗಾರು ಬೆಳೆಯನ್ನಾಗಿ ಬಿತ್ತನೆ ಮಾಡಿ  ಕೊಯ್ಲಿನ ನಂತರ ರಾಗಿ ಸಾವೆ ಅಥವಾ ಹುರುಳಿ ಬಿತ್ತನೆ ಮಾಡಬಹುದಾಗಿದೆ. ಡಿಸಿ‌ಒನ್ 5 ತಳಿಯ 14 ಕ್ವಿಂಟಲ್ ಬಿತ್ತನೆ ಅಲಸಂದೆ ಬೀಜ ಕೃಷಿ ಇಲಾಖೆ ಬಳಿ ದಾಸ್ತಾನಿದೆ.   

ಯಾವ ತಳಿ ರಾಗಿ ಉತ್ತಮ?

ಜಿಪಿಯು-28 ಎಮ್‌ಆರ್-6 ಎಮ್ ಎಲ್- 365 ತಳಿಯ ರಾಗಿ ಬೀಜಗಳನ್ನು ರೈತರು ಬಿತ್ತನೆ ಮಾಡಬೇಕು. ಮೇವಿನ ಅವಶ್ಯಕತೆ ಕಡಿಮೆಯಿದ್ದು ಕೇವಲ ಇಳುವರಿ ಮಾತ್ರ ಬಯಸುವವರಿಗೆ ಜಿಪಿಯು-28 ಉತ್ತಮ ತಳಿ.  ಎತ್ತರದ ಹುಲ್ಲು ಮತ್ತು ಅಧಿಕ ಹುಲ್ಲಿನ ಅವಶ್ಯಕತೆ ಇರುವ ರೈತರು ಎಂಆರ್‌ ಸರಣಿಯ ತಳಿಗಳನ್ನು ಬಿತ್ತನೆ ಮಾಡಿದರೆ ಲಾಭದಾಯಕ. 90 ರಿಂದ ನೂರು ದಿನಗಳ ಕಡಿಮೆ ಅವಧಿಯಲ್ಲಿ ತ್ವರಿತ ಫಸಲು ಬಯಸುವ ರೈತರು ಎಮ್ ಎಲ್ 365 ತಳಿ  ಆಯ್ಕೆ ಮಾಡಿಕೊಂಡರೆ ಉತ್ತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.