ADVERTISEMENT

ಟಾಸ್ಕ್ ಪೋರ್ಸ್ ಸಮಿತಿ ಸಭೆ: ಜ.2ನೇ ವಾರದಲ್ಲಿ ರಾಗಿ ಖರೀದಿ

ಜಿಲ್ಲೆಯ 7 ಕೇಂದ್ರಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 12:21 IST
Last Updated 24 ಡಿಸೆಂಬರ್ 2019, 12:21 IST
ಡಾ.ರಾಕೇಶ್ ಕುಮಾರ್
ಡಾ.ರಾಕೇಶ್ ಕುಮಾರ್   

ತುಮಕೂರು: ಜಿಲ್ಲೆಯ 7 ಖರೀದಿ ಕೇಂದ್ರಗಳಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಯೋಜನೆಯಡಿ ರಾಗಿ ಖರೀದಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ನಡೆದ 2019-20ನೇ ಸಾಲಿನ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ತೆರೆಯುವ ಬಗ್ಗೆ ನಡೆದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಸಾಲಿನಲ್ಲಿರುವ ಗುಬ್ಬಿ, ಚಿಕ್ಕನಾಯಕನಹಳ್ಳಿ, ಕುಣಿಗಲ್, ತಿಪಟೂರು, ತುಮಕೂರು, ತುರುವೇಕೆರೆ, ಹುಳಿಯಾರ್ ಖರೀದಿ ಕೇಂದ್ರಗಳಲ್ಲಿ ಈ ಬಾರಿಯೂ ಖರೀದಿ ಪ್ರಕ್ರಿಯೆ ಮುಂದುವರೆಸುವುದು ಸೂಕ್ತ ಎಂದು ತಿಳಿಸಿದರು.

ADVERTISEMENT

2019-20ನೇ ಸಾಲಿನ ಎಂಎಸ್‍ಪಿ ಯೋಜನೆಯಡಿ ರಾಗಿ ಖರೀದಿ ಬೆಲೆಯು ಕ್ವಿಂಟಲ್‍ಗೆ ₹3,150 ಇದೆ. ಜನವರಿ ಎರಡನೇ ವಾರದಲ್ಲಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಖರೀದಿ ಕೇಂದ್ರಗಳಲ್ಲಿ ಗುಣಮಟ್ಟದ ರಾಗಿ ಖರೀದಿ ಮಾಡಬೇಕು. ಖರೀದಿಯಲ್ಲಿ ಲೋಪವಾದರೆ ಸಂಬಂಧಪಟ್ಟವರೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.

ಕೇಂದ್ರಗಳಲ್ಲಿರುವ ಸಿಬ್ಬಂದಿ ಹಾಗೂ ಗ್ರೇಡರ್‌ಗಳಿಗೆ ಪ್ರಕ್ರಿಯೆ ಕುರಿತಂತೆ ಸೂಕ್ತ ಸಲಹೆ ಸೂಚನೆ ಹಾಗೂ ತರಬೇತಿ ನೀಡಿ ಪಾರದರ್ಶಕವಾಗಿ ಕೆಲಸ ನಡೆಯುವಂತೆ ನಿಗಾ ವಹಿಸಬೇಕು ಎಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಖರೀದಿ ಕೇಂದ್ರಗಳಲ್ಲಿ ಎಂಎಸ್‍ಪಿ ಹಾಗೂ ರಾಗಿ ಖರೀದಿ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ರೈತರಿಗೆ ಯಾವುದೇ ಗೊಂದಲ ಉಂಟಾಗಬಾರದು. ಈ ಬಗ್ಗೆ ಕರಪತ್ರ ಹಂಚುವುದು, ಎಪಿಎಂಸಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್‌ಗಳ ಅಳವಡಿಕೆ ಹಾಗೂ ಧ್ವನಿವರ್ಧಕಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಕಳೆದ ಸಾಲಿನ ರಾಗಿ ಇಳುವರಿ ಹಾಗೂ ಈ ಸಾಲಿನಲ್ಲಿ ಬರಬಹುದಾದ ಇಳುವರಿಯ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಕಳೆದ ಸಾಲಿಗಿಂತ ಈ ಬಾರಿ ರಾಗಿ ಇಳುವರಿ ಶೇ 40-50ರಷ್ಟು ಅಧಿಕವಾಗಿರುವುದರಿಂದ ಖರೀದಿ ಕೇಂದ್ರಗಳಿಗೆ ಹೆಚ್ಚಿನ ರಾಗಿ ಬರುವ ನಿರೀಕ್ಷೆ ಇದೆ ಅವರು ತಿಳಿಸಿದರು.

ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಜಂಟಿ ನಿರ್ದೇಶಕ ಎಂ.ಸಿ.ಶ್ರೀನಿವಾಸಯ್ಯ, ಕಾನೂನು ಮಾಪನ ಇಲಾಖೆ ಅಧಿಕಾರಿಗಳು, ಕೃಷಿ ಮಾರುಕಟ್ಟೆ ಇಲಾಖೆಯ ಉಪ ನಿರ್ದೇಶಕರು, ರಾಜ್ಯ ಉಗ್ರಾಣ ನಿಗಮ ತುಮಕೂರು ಘಟಕ-1 ಮತ್ತು 2, ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.