ADVERTISEMENT

ತುಮಕೂರು: ಬ್ಯಾಂಕ್ ಮ್ಯಾನೇಜರ್‌ಗೆ ಸಚಿವರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 3:55 IST
Last Updated 8 ಆಗಸ್ಟ್ 2021, 3:55 IST

ತುಮಕೂರು: ನಿಗಮ, ಮಂಡಳಿಯ ಯೋಜನೆಯಡಿ ಫಲಾನುಭವಿಗಳಿಗೆ ಸಾಲ ನೀಡಲು ವಿಳಂಬ ಮಾಡಿದರೆ ಅಂತಹ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕಾನೂನು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಶನಿವಾರ ಎಚ್ಚರಿಕೆ ನೀಡಿದರು.

ಬ್ಯಾಂಕ್‍ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕ್ ವ್ಯವಸ್ಥಾಪಕರು ವಿಳಂಬ ಮಾಡುತ್ತಿರುವುದರಿಂದ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ನಿರ್ಲಕ್ಷ್ಯ ತಾಳುವ ವ್ಯವಸ್ಥಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದರು.

ನಿಗಮಗಳಿಂದ ಸೌಲಭ್ಯ ಪಡೆಯಲು ಆಯ್ಕೆಯಾದ ಫಲಾನುಭವಿಗಳಿಗೆ ಯೋಜನೆಯ ಫಲ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ದೂರುಗಳು ಬಂದಿವೆ. ಬ್ಯಾಂಕ್‍ಗಳು ಫಲಾನುಭವಿಗಳನ್ನು ಅಲೆದಾಡಿಸದೆ ಸಾಲ ನೀಡಬೇಕು ಎಂದು ಹೇಳಿದರು.

ADVERTISEMENT

ವಾರ್ಷಿಕ ಗುರಿ ನಿಗದಿಯಾಗದಿರುವ ಬ್ಯಾಂಕ್‍ಗಳನ್ನು ಸಾಲ ಒದಗಿಸುವ ಬ್ಯಾಂಕ್‍ಗಳ ಪಟ್ಟಿಯಿಂದ ಕೈ ಬಿಡಬೇಕು. ವಿವಿಧ ಇಲಾಖೆಗಳಡಿ ನೀಡಲಾಗುವ ಸಾಲ ಸೌಲಭ್ಯಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಬೇಕು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್‌ಗೆ ಸೂಚಿಸಿದರು.

ತೆಂಗು ಪುನಶ್ಚೇತನಕ್ಕೆ ಒತ್ತು ನೀಡುವ ಉದ್ದೇಶದಿಂದ ತೆಂಗು ಆಧಾರಿತ ಉತ್ಪನ್ನಗಳ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು. ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಮುಂದಾಗಬೇಕು. ಬ್ಯಾಂಕ್‍ಗಳು ಇಂತಹ ಕೈಗಾರಿಕೆಗಳಿಗೆ ಸಾಲ ಒದಗಿಸಬೇಕು. ಆರ್ಥಿಕ ಸಂಕಷ್ಟದಲ್ಲಿರುವ ಕೈಗಾರಿಕೆಗಳಿಗೆ ಅಗತ್ಯವಿರುವ ಸಾಲದ ನೆರವು ನೀಡಬೇಕು ಎಂದು ನಿರ್ದೇಶಿಸಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ‘ಪರಿಶಿಷ್ಟ ಜಾತಿ, ಪಂಗಡಗಳ ಫಲಾನುಭವಿಗಳಿಗೆ ಸಾಲ ನೀಡಲು ನಿರಾಕರಿಸಿದರೆ ಕ್ರಮ ಜರುಗಿಸಲಾಗುವುದು. ನಿಗದಿತ ಸಮಯದೊಳಗೆ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಬೇಕು’ ಎಂದು ಹೇಳಿದರು.

ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ಜಿಲ್ಲಾ ಲೀಡ್ ಬ್ಯಾಂಕ್‍ನ ಭೈರವಿ ಯಲೂರ್‍ಕರ್, ನಬಾರ್ಡ್ ಮುಖ್ಯ ವ್ಯವಸ್ಥಾಪಕ ನೀರಜಾ ಕುಮಾರ್ ವರ್ಮಾ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.