ADVERTISEMENT

ಅಧಿಕಾರಕ್ಕಾಗಿ ಸಂವಿಧಾನ ದುರ್ಬಳಕೆ: ಪ್ರತಾಪ್‌ ಸಿಂಹ

‘ತುರ್ತು ಪರಿಸ್ಥಿತಿಗೆ 50 ವರ್ಷ’ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 16:24 IST
Last Updated 25 ಜೂನ್ 2025, 16:24 IST
ತುಮಕೂರಿನಲ್ಲಿ ಬುಧವಾರ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿಗೆ 50 ವರ್ಷ’ ವಿಚಾರ ಸಂಕಿರಣದಲ್ಲಿ ಮುಖಂಡರಾದ ಜಯದೇವಮ್ಮ, ಎ.ಬಿ.ರಾಮಚಂದ್ರ, ರೇವಣಸಿದ್ದಪ್ಪ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಬಿ.ಸುರೇಶ್‍ಗೌಡ, ಜಿ.ಬಿ.ಜ್ಯೋತಿಗಣೇಶ್‌ ಹಾಜರಿದ್ದರು
ತುಮಕೂರಿನಲ್ಲಿ ಬುಧವಾರ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿಗೆ 50 ವರ್ಷ’ ವಿಚಾರ ಸಂಕಿರಣದಲ್ಲಿ ಮುಖಂಡರಾದ ಜಯದೇವಮ್ಮ, ಎ.ಬಿ.ರಾಮಚಂದ್ರ, ರೇವಣಸಿದ್ದಪ್ಪ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಬಿ.ಸುರೇಶ್‍ಗೌಡ, ಜಿ.ಬಿ.ಜ್ಯೋತಿಗಣೇಶ್‌ ಹಾಜರಿದ್ದರು   

ತುಮಕೂರು: ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ಗೆ ಸಂವಿಧಾನದ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಕಿಡಿಕಾರಿದರು.

ನಗರದಲ್ಲಿ ಬುಧವಾರ ವಿವಿಧ ಸಂಘ ಸಂಸ್ಥೆಗಳಿಂದ ಹಮ್ಮಿಕೊಂಡಿದ್ದ ‘ತುರ್ತು ಪರಿಸ್ಥಿತಿಗೆ 50 ವರ್ಷ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಜೂನ್ 25, 1975 ದೇಶದ ಇತಿಹಾಸದಲ್ಲಿ ಕರಾಳ ದಿನ. ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅನ್ಯಾಯ. ಇಂದಿರಾ ಗಾಂಧಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಪ್ರಜಾಪ್ರಭುತ್ವದ ಕುತ್ತಿಗೆ ಹಿಸುಕಿದರು. ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ತಳ್ಳಿ, ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡಿ, ಮಾನವ ಹಕ್ಕು ಮೊಟಕುಗೊಳಿಸಿದರು ಎಂದರು.

ADVERTISEMENT

ವಿರೋಧ ಧ್ವನಿ ಅಡಗಿಸುವ ಕುತಂತ್ರ ಕಾಂಗ್ರೆಸ್‌ ಮಾಡುತ್ತಲೇ ಬಂದಿದೆ. ಟೀಕಾಕಾರರ ವಿರುದ್ಧ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಕಿರುಕುಳ ಕೊಡುವ ಪ್ರವೃತ್ತಿ ಇಂದಿಗೂ ನಡೆಯುತ್ತಿದೆ. ಇಂದಿರಾ ಗಾಂಧಿ ಸಂವಿಧಾನಕ್ಕೆ ಅವಮಾನ ಮಾಡಿದಾಗ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸಿದ್ದರು. ಈ ಬಗ್ಗೆ ಚಕಾರ ಎತ್ತಲಿಲ್ಲ. ಈಗ ಸಂವಿಧಾನ ರಕ್ಷಕರು ಎಂದು ಡೋಂಗಿತನ ತೋರುತ್ತಿದ್ದಾರೆ ಎಂದು ಟೀಕಿಸಿದರು.

ಆಗ ಇಂದಿರಾ ಗಾಂಧಿ ಅಧಿಕಾರಕ್ಕಾಗಿ ಸಂವಿಧಾನ ದುರ್ಬಳಕೆ ಮಾಡಿಕೊಂಡರು. ಈಗ ರಾಹುಲ್ ಗಾಂಧಿ ಅಧಿಕಾರ ಗಳಿಸಲು ಸಂವಿಧಾನವನ್ನು ತಮ್ಮ ಸ್ವಹಿತಾಸಕ್ತಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಂವಿಧಾನ ದುರ್ಬಲಗೊಳಿಸಿ ತಮ್ಮ ನಿರಂಕುಶ ಆಡಳಿತ ಸ್ಥಾಪಿಸಲು ಮುಂದಾಗಿದ್ದ ಕಾಂಗ್ರೆಸ್‌ ನಂಬಲರ್ಹವಲ್ಲದ ಪಕ್ಷ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡಿದ ಶಕ್ತಿಗಳ ವಿರುದ್ಧ ನಡೆದ ಹೋರಾಟ ಇಂದಿಗೂ ಪ್ರೇರಣೆ ನೀಡುತ್ತದೆ. ಎಲ್ಲರು ಹೋರಾಟ ಅರಿಯಬೇಕು ಎಂದು ಹೇಳಿದರು.

ಶಾಸಕರಾದ ಬಿ.ಸುರೇಶ್‍ಗೌಡ, ಜಿ.ಬಿ.ಜ್ಯೋತಿಗಣೇಶ್‌, ಮುಖಂಡರಾದ ಜಯದೇವಮ್ಮ, ಎ.ಬಿ.ರಾಮಚಂದ್ರ, ರೇವಣಸಿದ್ದಪ್ಪ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.