ಕುಣಿಗಲ್: ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಶಾಸಕ ಡಾ.ರಂಗನಾಥ್ ಮಂಗಳವಾರ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ, ಉಪನ್ಯಾಸಕರೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸಮಸ್ಯೆಗಳ ಸರಮಾಲೆಯನ್ನೇ ತೆರೆದಿಟ್ಟರು. ಶೇ 30 ವಿದ್ಯಾರ್ಥಿಗಳು ಕಾಲೇಜು ಆವರಣಕ್ಕೆ ಬರುತ್ತಾರೆ ಹೊರತು ತರಗತಿಗಳಿಗೆ ಹಾಜರಾಗುವುದಿಲ್ಲ. ವಿದ್ಯಾರ್ಥಿಗಳಲ್ಲದವರು ಕಾಲೇಜು ಆವರಣ ಪ್ರವೇಶಿಸಿ ಪುಂಡಾಟ ಮಾಡುತ್ತಿದ್ದಾರೆ. ಇನ್ನೂ ಕೆಲ ವಿದ್ಯಾರ್ಥಿಗಳು ಪಾನಮತ್ತರಾಗಿ ಕಾಲೇಜಿಗೆ ಬರುತ್ತಿದ್ದಾರೆ. ಪ್ರಶ್ನಿಸಿದ ಉಪನ್ಯಾಸಕರ ಕಾರಿನ ಗಾಜು ಸೇರಿದಂತೆ ಕಾಲೇಜು ಕಿಟಕಿ ಗಾಜು ಪುಡಿಪುಡಿಯಾಗಿದೆ. ಕೆಲ ವಿದ್ಯಾರ್ಥಿಗಳ ಮೇಲೆ ರ‍್ಯಾಗಿಂಗ್ ಮತ್ತು ವಿದ್ಯಾರ್ಥಿನಿಯರೊಂದಿಗೆ ಕೀಟಲೆ ಸಹ ಮಾಡುತ್ತಿದ್ದಾರೆ ಎಂದು ದೂರಿ ಕ್ರಮಕ್ಕೆ ಮನವಿ ಮಾಡಿದರು.
ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬರುತ್ತಿದ್ದಾರೆ. ಇಂಗ್ಲಿಷ್‌ನಲ್ಲಿ ಪ್ರಬುದ್ಧತೆ ಸಾಧಿಸಲು ಸಾಧ್ಯವಾಗದ ಕಾರಣ ಸಮಸ್ಯೆಯಾಗುತ್ತಿದೆ. ಪಿಯು ಹಂತದಲ್ಲಿ ಪಾಸಿಂಗ್ ಮಾರ್ಕ್ಸ್ ಪಡೆಯುವ ಮಟ್ಟಕ್ಕೆ ಮಾತ್ರವೇ ಶಿಕ್ಷಣ ನೀಡಿದ್ದಾರೆ. ಪದವಿ ಹಂತಕ್ಕೆ ಬಂದಾಗ ಸಮಸ್ಯೆಯಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಬದಲಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ಬಂದಿರುವುದು ಸಹ ಫಲಿತಾಂಶ ಕಡಿಮೆಯಾಗಲು ಕಾರಣವಾಗಿದೆ ಎಂದೂ ಹೇಳಿದರು.
ಶಾಸಕ ಡಾ.ರಂಗನಾಥ್ ಮತನಾಡಿ, ಕಾಲೇಜಿನಲ್ಲಿ ಶೈಕ್ಷಣಿಕ ವ್ಯವಸ್ಥೆ ಹದಗೆಡಲು ಬಿಡುವುದಿಲ್ಲ. ಹುಡುಗಾಟದ ಹುಡುಗರಿಗೆ ಕಾನೂನು ಕ್ರಮ ತೆಗೆದುಕೊಂಡರೆ ತಿದ್ದಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಪುಂಡಾಟಿಕೆ ನಿಯಂತ್ರಿಸಲು ಸೂಕ್ತ ಪೊಲೀಸ್ ವ್ಯವಸ್ಥೆಗೆ ಸಿಪಿಐ ನವೀನ್ ಗೌಡ ಅವರಿಗೆ ಸೂಚನೆ ನೀಡಿದರು.
ಸ್ಪರ್ಧಾತ್ಮಕ ಪ್ರಪಂಚದಲ್ಲಿ ಎಐ ತಂತ್ರಜ್ಞಾನದಿಂದ ವಿಫುಲ ಸಮಸ್ಯೆಗಳು ಸೃಷ್ಠಿಯಾಗುತ್ತಿದೆ. ಜತೆಗೆ ವಿಫುಲ ಅವಕಾಶಗಳು ದೊರೆಯುತ್ತಿದ್ದು, ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಸಾಧನೆ ಮಾಡಬೇಕಿದೆ. ವಿದ್ಯಾರ್ಥಿಗಳಿಗೆ ಅಗತ್ಯ ಸಹಕಾರ ನೀಡಲು ಸಿದ್ಧ ಎಂದರು.
ಉಪನ್ಯಾಸಕರೊಂದಿಗೆ ಸಭೆ ನಡೆಸಿ, ಕಾಲೇಜಿಗೆ ಗ್ರಾಮೀಣ ಪ್ರದೇಶದಿಂದ ಹೆಚ್ಚು ವಿದ್ಯಾರ್ಥಿಗಳು ಬರುತ್ತಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆ, ಮನಸ್ಥಿತಿ ಅರಿತು ಸ್ಪಂದಿಸಿ ಕಾರ್ಯನಿರ್ವಹಿಸಿ. ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿದರು.
ಪ್ರಾಂಶುಪಾಲೆ ಮಾಯಾಸಾರಂಗಪಾಣಿ, ಉಪನ್ಯಾಸಕ ವರ್ಗ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.