ADVERTISEMENT

ಶಾಸಕರ ಪಿಎ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ

ಕುಣಿಗಲ್; ಎಲ್ಲೆಡೆ ಹರಿದಾಡುತ್ತಿದೆ ಆಡಿಯೊ; ಜೆಡಿಎಸ್, ಬಿಜೆಪಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 16:34 IST
Last Updated 18 ಅಕ್ಟೋಬರ್ 2020, 16:34 IST

ಕುಣಿಗಲ್‌: ಶಾಸಕ ಡಾ.ಎಚ್‌.ಡಿ.ರಂಗನಾಥ್ ಅವರ ಆಪ್ತ ಸಹಾಯಕ ಮಾದಗೋನಹಳ್ಳಿ ಚಂದ್ರು, ಡಿ ಹೊಸಹಳ್ಳಿ ಗ್ರಾಮಪಂಚಾಯಿತಿ ನೋಡಲ್ ಅಧಿಕಾರಿಯಾಗಿದ್ದ ಕೈಲಾಸ್ ಮೂರ್ತಿ ಅವರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾದ ಆಡಿಯೊ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಕೈಲಾಸ್ ಮೂರ್ತಿ ಮತ್ತು ಕರಿಗೌಡ ಅವರ ನಡುವೆ ಈ ವಿಚಾರವಾಗಿ ನಡೆದ ಮಾತುಕತೆ ಆಡಿಯೊದಲ್ಲಿದೆ. ‘ಚಂದ್ರು ಹಣ ಕೇಳಿದ. ಕೊಡುವುದಕ್ಕೆ ಆಗಲ್ಲ ಎಂದೆ. ಬದಲಾವಣೆ ಮಾಡಿಸಿದ. ನರೇಗಾ ಯೋಜನೆಯಡಿ ಕೆಲಸ ಮಾಡಿಲ್ಲದಿದ್ದರೂ 40 ಕಡತಕ್ಕೆ ಸಹಿ ಹಾಕಿ ಎಂದಿದ್ದ. ಇದರಲ್ಲಿ ಶಾಸಕರು ಪಾತ್ರ ಇಲ್ಲ’ ಎಂದು ಕೈಲಾಸ್ ಮೂರ್ತಿ ಮಾತನಾಡಿದ್ದಾರೆ.

ಈಗ ನನ್ನ ಸ್ಥಳಕ್ಕೆ ಬಂದಿರುವ ಅಧಿಕಾರಿ ಕಚೇರಿಗೆ ಬರುವುದೇ ಇಲ್ಲ. ಕೆಲಸ ಮಾಡಿದವರನ್ನು ಏಕೆ ಬದಲಾವಣೆ ಮಾಡಿದ್ದೀರಿ ಎಂದು ಜಿಲ್ಲಾಧಿಕಾರಿ ಅವರನ್ನು ಕೇಳಿ, ಎಂದು ಜಿಲ್ಲಾಧಿಕಾರಿ ಅವರ ಮೊಬೈಲ್‌ ಸಂಖ್ಯೆಯನ್ನು ಕೈಲಾಶ್ ಮೂರ್ತಿ, ಕರಿಗೌಡ ಅವರಿಗೆ ನೀಡಿದ್ದಾರೆ.

ADVERTISEMENT

ನಿಷ್ಠಾವಂತ ಅಧಿಕಾರಿಯನ್ನು ಶಾಸಕರು ವರ್ಗಾವಣೆ ಮಾಡಿದ್ದಾರೆ. ಈ ಆಡಿಯೊ ಶಾಸಕರು ಮತ್ತು ಅವರ ಬೆಂಬಲಿಗರ ಭ್ರಷ್ಟಾಚಾರವನ್ನು ಸಾಬೀತು ಪಡಿಸುತ್ತದೆ ಎಂದು ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ದೂರುತ್ತಿದ್ದಾರೆ.

‘ನಾನು ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಆದರೂ ಕೈಲಾಶ್ ಮೂರ್ತಿ ಆರೋಪ ಮಾಡಿದ್ದಾರೆ. ಇದರಿಂದ ನನ್ನ ವಿರುದ್ಧ ಅಪಪ್ರಚಾರ ಹೆಚ್ಚುತ್ತಿದೆ. ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಕುಣಿಗಲ್ ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದು ಚಂದ್ರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.