ತುಮಕೂರು: ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ಬಿತ್ತನೆ ಪ್ರಮಾಣ ತೀವ್ರವಾಗಿ ಕುಸಿತ ಕಂಡಿದೆ. ಜಿಲ್ಲೆಯಲ್ಲಿ ಈವರೆಗೆ ಕೇವಲ ಶೇ 37.7ರಷ್ಟು ಪ್ರದೇಶದಲ್ಲಷ್ಟೇ ಬಿತ್ತನೆಯಾಗಿದ್ದು, ಅನ್ನದಾತರಲ್ಲಿ ಆತಂಕ ಮನೆ ಮಾಡಿದೆ.
ಜೂನ್‌ನಲ್ಲಿ ವಾಡಿಕೆ 59 ಮಿ.ಮೀ ಮಳೆಯಾಗಬೇಕಿದ್ದು, 35 ಮಿ.ಮೀ (ಶೇ 40ರಷ್ಟು ಕೊರತೆ) ಬಿದ್ದಿದೆ. ಜುಲೈನಲ್ಲಿ 68 ಮಿ.ಮೀ ಬದಲಿಗೆ 56 ಮಿ.ಮೀ (ಶೇ 17ರಷ್ಟು ಕೊರತೆ) ಮಳೆಯಾಗಿದೆ. ಜುಲೈ ಮಧ್ಯ ಭಾಗದ ನಂತರ ತುಂತುರು ಮಳೆಯಾಗಿದ್ದು, ಇದು ಉಳುಮೆ, ಬಿತ್ತನೆಗೆ ನೆರವಾಗಿಲ್ಲ. ಕೇವಲ ಮಳೆ ಬಿದ್ದ ಲೆಕ್ಕವಷ್ಟೇ ಸಿಕ್ಕಿದ್ದು, ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 3.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆ ಬಿತ್ತನೆ ಮಾಡಬೇಕಿದ್ದು, 1.18 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಇನ್ನೂ ಶೇಂಗಾ ಬಿತ್ತನೆಗೆ ಸಮಯ ಮುಗಿದಿದ್ದು, ಈವರೆಗೆ ಒಟ್ಟು ಗುರಿಯಲ್ಲಿ ಅರ್ಧದಷ್ಟೂ ಸಾಧನೆಯಾಗಿಲ್ಲ. ಈ ವರ್ಷ 76,570 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, 28,454 ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ.
ವರ್ಷದಿಂದ ವರ್ಷಕ್ಕೆ ಶೇಂಗಾ ಬಿತ್ತನೆ ಪ್ರದೇಶ ಕುಸಿಯುತ್ತಲೇ ಸಾಗಿದ್ದು, ಹಿಂದಿನ ವರ್ಷಗಳಲ್ಲಿ 3 ಲಕ್ಷ ಹೆಕ್ಟೇರ್‌ವರೆಗೂ ಬಿತ್ತನೆ ಮಾಡಲಾಗುತಿತ್ತು. ಆದರೆ ಈಗ ಅದರಲ್ಲಿ ಕಾಲು ಭಾಗದಷ್ಟು ಗುರಿ ಹೊಂದಿದ್ದರೂ ಸಾಧನೆ ಮಾತ್ರ ಅತ್ಯಲ್ಪ. ಇದರಿಂದಾಗಿ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುವ ಪ್ರಮಾಣ ಹೆಚ್ಚುತ್ತಲೇ ಸಾಗಿದೆ. ಮಳೆ ಕಣ್ಣಾಮುಚ್ಚಾಲೆ, ರೋಗ ಬಾಧೆ, ಬೆಲೆ ಕುಸಿತ ಮತ್ತಿತರ ಕಾರಣಗಳಿಂದಾಗಿ ಪ್ರತಿ ವರ್ಷವೂ ಧಾರಣೆ ಇಳಿಮುಖವಾಗಿದೆ. ಇದರಿಂದ ಬೇಸತ್ತ ರೈತರು, ಬಿತ್ತನೆ ಕೂಲಿಯೂ ಹುಟ್ಟುವುದಿಲ್ಲ ಎಂಬ ಕಾರಣಕ್ಕೆ ಶೇಂಗಾ ಬೆಳೆ ಕೈಬಿಟ್ಟು, ವಾಣಿಜ್ಯ ಬೆಳೆಯತ್ತ ಮುಖ ಮಾಡಿದ್ದಾರೆ.
ರಾಗಿಗೂ ಹಿನ್ನಡೆ: ಜಿಲ್ಲೆಯ ಪ್ರಮುಖ ಆಹಾರ ಬೆಳೆ ರಾಗಿ ಬಿತ್ತನೆಯೂ ಸಾಧ್ಯವಾಗಿಲ್ಲ. 1,51,375 ಹೆಕ್ಟೇರ್ ಗುರಿಯಲ್ಲಿ ಕೇವಲ 46,867 ಹೆಕ್ಟೇರ್‌ಗಳಲ್ಲಷ್ಟೇ ಬಿತ್ತನೆಯಾಗಿದೆ. ಗುರಿಯಲ್ಲಿ ಮೂರನೇ ಒಂದು ಭಾಗದಷ್ಟೂ ಪ್ರಗತಿಯಾಗಿಲ್ಲ. ಹಿಂದಿನ ವರ್ಷ 1.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಬೆಂಬಲ ಬೆಲೆಯಲ್ಲಿ (ಕ್ವಿಂಟಲ್‌ಗೆ ₹4,290) ರಾಗಿ ಖರೀದಿಸುವುದರಿಂದ ಉತ್ತೇಜಿತರಾದ ರೈತರು ಹಿಂದಿನ ವರ್ಷ ಬಿತ್ತನೆಗೆ ಉತ್ಸಾಹ ತೋರಿದ್ದರು.
ಈ ಬಾರಿಯೂ ಅದೇ ಪ್ರಮಾಣದಲ್ಲಿ ರಾಗಿ ಬಿತ್ತನೆ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಸಾಕಷ್ಟು ಕಡೆಗಳಲ್ಲಿ ಉಳುಮೆ ಕಾರ್ಯವೇ ಮುಗಿದಿಲ್ಲ. ಭೂಮಿ ಹದಗೊಳ್ಳದೆ ಬಿತ್ತನೆ ಮಾಡಲು ಸಾಧ್ಯವಿಲ್ಲ. ಆಗಸ್ಟ್ ಮೊದಲ ವಾರದಲ್ಲಿ ಬಿತ್ತನೆಗೆ ಅವಕಾಶವಿದ್ದು, ಗುರಿಯಲ್ಲಿ ಅರ್ಧದಷ್ಟು ಸಾಧನೆಯಾಗಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಜೋಳ 2,034 ಹೆಕ್ಟೇರ್ (3,753 ಹೆಕ್ಟೇರ್ ಗುರಿ), ತೊಗರಿ 9,523 ಹೆಕ್ಟೇರ್ (15,778 ಹೆಕ್ಟೇರ್ ಗುರಿ), ಅವರೆ 119 ಹೆಕ್ಟೇರ್ (3,000 ಹೆಕ್ಟೇರ್ ಗುರಿ), ಹತ್ತಿ 6,286 ಹೆಕ್ಟೇರ್ (3,640 ಹೆಕ್ಟೇರ್ ಗುರಿ) ಬಿತ್ತನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.