ADVERTISEMENT

ಕ್ವಿಂಟಲ್‌ಗೆ ₹20 ಸಾವಿರಕ್ಕೆ ಆಗ್ರಹ

ಟೌನ್‌ಹಾಲ್‌ ವೃತ್ತದಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 14:52 IST
Last Updated 5 ಮಾರ್ಚ್ 2020, 14:52 IST
ಮುದ್ದಹನುಮೇಗೌಡ
ಮುದ್ದಹನುಮೇಗೌಡ   

ತುಮಕೂರು: ಕೊಬ್ಬರಿಗೆ ಕ್ವಿಂಟಲ್‌ಗೆ ಕನಿಷ್ಠ ₹20 ಸಾವಿರ ಬೆಂಬಲ ಬೆಲೆ ನೀಡುವುದು ಸೇರಿದಂತೆ ರೈತರ ವಿವಿಧ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಮಾರ್ಚ್‌ 9ರಂದು ನಗರದ ಟೌನ್‌ಹಾಲ್‌ ವೃತ್ತದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಗುರುವಾರ ತಿಳಿಸಿದರು.

ಜಿಲ್ಲೆಯ ತೆಂಗು ಬೆಳೆಗಾರರು ನುಸಿಪೀಡೆ, ಬರ, ಅಂತರ್ಜಲ ಕುಸಿತ, ಕೊಳವೆ ಬಾವಿ ವೈಫಲ್ಯ, ಕೀಟ ಬಾಧೆಗಳಿಂದ ಕಂಗಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೊಬ್ಬರಿ ಬೆಲೆ ಕುಸಿತದಿಂದ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯಲ್ಲಿ 1,42,710 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗಿದ್ದು, ಇದರಲ್ಲಿ 49,149 ಹೆಕ್ಟೇರ್ ಬೆಳೆ ನಾಶವಾಗಿದೆ. ಅಲ್ಲದೆ, 29,807 ಹೆಕ್ಟೇರ್ ಅಡಕೆ ಬೆಳೆಯಲ್ಲಿ 12,900 ಹೆಕ್ಟೇರ್ ಬೆಳೆ ನಾಶವಾಗಿದೆ. ಕಷ್ಟಪಟ್ಟು ಉಳಿಸಿಕೊಂಡ ಬೆಳೆಗೂ ಉತ್ತಮ ಬೆಲೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಕೃಷಿ ಬೆಲೆ ಆಯೋಗದ ಪ್ರಕಾರ 1 ಕ್ವಿಂಟಾಲ್‌ ಕೊಬ್ಬರಿ ಬೆಳೆಯಲು ₹11,300 ವೆಚ್ಚವಾಗುತ್ತಿದೆ. ಆದರೆ, ಕ್ವಿಂಟಾಲ್‌ಗೆ ₹10 ಸಾವಿರಕ್ಕೆ ಕುಸಿದಿದೆ. ಉತ್ಪಾದನಾ ಬೆಲೆಗಿಂತ ಬೆಲೆ ಕಡಿಮೆಯಾಗಿದೆ. ರಾಜ್ಯದ ಸಂಸದರು, ಶಾಸಕರು ತೆಂಗು ಬೆಳೆಗಾರರ ಪರವಾಗಿ ಮಾತನಾಡಬೇಕು. ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಹೋರಾಟದಲ್ಲಿ ಭಾಗವಹಿಸುವ ಮೂಲಕ ರೈತರ ಋಣ ತೀರಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಸಿ.ಬಿ.ಶಶಿಧರ್, ಕೆ.ಇ.ದೇವರಾಜು, ರಾಯಸಂದ್ರ ರವಿಕುಮಾರ್, ಎನ್.ಆರ್.ಜಯರಾಮ್, ಗೂಳೂರು ವಿಜಯಕುಮಾರ್, ಹೆಬ್ಬೂರು ಚಿಕ್ಕಸ್ವಾಮಿ, ರಮೇಶ್ ಇದ್ದರು.

ಪ್ರಮುಖ ಬೇಡಿಕೆಗಳು

* ಕ್ವಿಂಟಲ್‌ಗೆ ₹20 ಸಾವಿರ ಬೆಂಬಲ ಬೆಲೆ ನೀಡಬೇಕು

* ತೆಂಗು, ಕೊಬ್ಬರಿ ಉತ್ಪನ್ನಗಳ ಸಂಶೋಧನೆ ಕೋರ್ಸ್‌ ಆರಂಭಿಸಬೇಕು

* ನೀರಾ ಇಳಿಸಲು ಅನುಮತಿ ನೀಡಬೇಕು

* ಹಾಪ್‌ಕಾಮ್ಸ್‌, ನಂದಿನಿ ಮಾದರಿಯಲ್ಲಿ ಎಳನೀರಿಗೆ ಮಾರುಕಟ್ಟೆ ಸೃಷ್ಟಿಸಬೇಕು

ಸಂಸದರು ಧ್ವನಿ ಎತ್ತಲಿ

ಸಂಸದ ಜಿ.ಎಸ್.ಬಸವರಾಜ್ ಅವರಿಗೆ ಜಿಲ್ಲೆಯ ರೈತರ ಸಂಕಷ್ಟದ ಬಗ್ಗೆ ಹೆಚ್ಚಿನ ಮಾಹಿತಿ ಇದೆ. ಹಾಗಾಗಿ ರೈತರ ಸಮಸ್ಯೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಕು. ಇತರೆ ಸಂಸದರನ್ನು ಒಗ್ಗೂಡಿಸಿ ಸಂಸತ್‌ನಲ್ಲಿ ಹೋರಾಟ ಮಾಡಬೇಕು ಎಂದು ಮುದ್ದಹನುಮೇಗೌಡ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.