ADVERTISEMENT

ನಾಫೆಡ್‌: ಕೇಂದ್ರ ಸರ್ಕಾರದ ಮೇಲೆ ಒತ್ತಡ

ಕೊಬ್ಬರಿ ಬೆಲೆ ಕುಸಿತ: ತಿಪಟೂರಿನಲ್ಲಿ ರೈತರೊಂದಿಗೆ ಅಧಿಕಾರಗಳ ಚರ್ಚೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 9:34 IST
Last Updated 7 ಜೂನ್ 2020, 9:34 IST
ರೈತ ಭವನದಲ್ಲಿ ಕೊಬ್ಬರಿ ಧಾರಣೆ ಕುಸಿತದ ಹಿನ್ನೆಲೆಯಲ್ಲಿ ರೈತರೊಂದಿಗೆ ಚರ್ಚೆ ನಡೆಸಿದ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ
ರೈತ ಭವನದಲ್ಲಿ ಕೊಬ್ಬರಿ ಧಾರಣೆ ಕುಸಿತದ ಹಿನ್ನೆಲೆಯಲ್ಲಿ ರೈತರೊಂದಿಗೆ ಚರ್ಚೆ ನಡೆಸಿದ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ   

ತಿಪಟೂರು: ಕೊಬ್ಬರಿ ಸೇರಿದಂತೆ ಯಾವುದೇ ಬೆಳೆಗಳ ಬೆಲೆ ಬೆಂಬಲ ಬೆಲೆಗಿಂತ ಕಡಿಮೆಯಾದಾಗ ವರದಿಯನ್ನು ಪಡೆಯದೆ ಸ್ವಯಂಚಾಲಿತ ವ್ಯವಸ್ಥೆ (ಆಟೊ ಮೊಬಿಲೈಸ್ಡ್‌) ಮೂಲಕ ನಾಫೆಡ್‌ ಕೇಂದ್ರ ಪ್ರಾರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ತಿಳಿಸಿದರು.

ಎಪಿಎಂಸಿಯ ರೈತ ಭವನದಲ್ಲಿ ಕೊಬ್ಬರಿ ಧಾರಣೆ ಕುಸಿತದ ಕುರಿತು ಅಧಿಕಾರಿಗಳು, ರೈತರೊಂದಿಗೆ ಶನಿವಾರ ಚರ್ಚೆ ನಡೆಸಿದರು.

ಕಳೆದ ವರ್ಷ ಕ್ವಿಂಟಲ್‌ ಕೊಬ್ಬರಿಗೆ ₹ 15 ಸಾವಿರದಿಂದ ₹ 17 ಸಾವಿರವಿತ್ತು. ಈಗ ದಿಢೀರ್‌ ಬೆಂಬಲ ಬೆಲೆಗಿಂತ ಕಡಿಮೆಯಾಗಿದೆ. ನಾಫೆಡ್‌ ಪ್ರಾರಂಭಿಸಲು ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದ್ದು, ಶೀಘ್ರವೇ ತೆರೆಯುವ ಭರವಸೆಯಿದೆ ಎಂದರು.

ADVERTISEMENT

ಕೊಬ್ಬರಿ ಬೆಲೆ ದಿಢೀರ್ ಕುಸಿತಕ್ಕೆ ಕಾರಣವೇನು ಎಂಬುದರ ಕುರಿತು ಸಂಪೂರ್ಣ ವರದಿ ನೀಡಬೇಕು. ತಿಪಟೂರು ಕೊಬ್ಬರಿ ಉತ್ತಮ ಗುಣಮಟ್ಟದ್ದಾಗಿದ್ದು, ಇದಕ್ಕೆ ಭೌಗೋಳಿಕ ಸೂಚ್ಯಂಕ (ಜಿ.ಐ) ದೊರೆತಾಗ ಮಾತ್ರ ಬೆಲೆ ಹೆಚ್ಚಳ ಸಾಧ್ಯ. ಅಧಿಕಾರಿಗಳು ಇದಕ್ಕೆ ಸಂಬಂಧಿಸಿದ ದಾಖಲೆ ಸಿದ್ಧಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ನಾಫೆಡ್‌ ಕೇಂದ್ರ ಪ್ರಾರಂಭಿಸುವಂತೆ ಎರಡು ತಿಂಗಳಿನಿಂದ ಒತ್ತಾಯಿಸುತ್ತಿದ್ದರೂ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸದೆ ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಈಗ ನಾಫೆಡ್‌ ಪ್ರಾರಂಭಿಸುವ ಹಂತದಲ್ಲಿ ಕೊಬ್ಬರಿ ಬೆಲೆ ಹೆಚ್ಚಿಸಿ ನಾಫೆಡ್‌ ಪ್ರಾರಂಭವಾಗದಂತೆ ತಡೆಯುವ ಹುನ್ನಾರಗಳು ನಡೆದಿವೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು ಆರೋಪಿಸಿದರು.

ಎಪಿಎಂಸಿ ಅಧ್ಯಕ್ಷ ಲಿಂಗರಾಜು, ಉಪಾಧ್ಯಕ್ಷ ಬಜಗೂರು ಮಂಜುನಾಥ್, ಮಾಜಿ ಅಧ್ಯಕ್ಷ ದಿವಾಕರ್, ಉಪವ್ಯವಸ್ಥಾಪಕ ಯತ್ನಾಳ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ರಘು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಗನ್ನಾಥಗೌಡ, ರೈತರಾದ ದೇವರಾಜು ತಿಮ್ಲಾಪುರ, ಮನೋಹರ್, ಬೆಲೆಕಾವಲು ಸಮಿತಿಯ ಶ್ರೀಕಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.